ADVERTISEMENT

ಬೆಳಗಾವಿ | ಪೂರ್ವ ಮುಂಗಾರಲ್ಲಿ ಮಳೆ ಕೊರತೆ

ಮುಂಗಾರು ಹಂಗಾಮಿಗೆ ಸಜ್ಜಾಗುತ್ತಿರುವ ಕೃಷಿಕರು, ಇಲಾಖೆ

ಎಂ.ಮಹೇಶ
Published 27 ಮೇ 2020, 20:30 IST
Last Updated 27 ಮೇ 2020, 20:30 IST

ಬೆಳಗಾವಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ 19 ಮಿ.ಮೀ. ಮಳೆ ಕೊರತೆ ಕಂಡುಬಂದಿದೆ.

ಮಾರ್ಚ್‌ 1ರಿಂದ ಮೇ 31ರವರೆಗಿನ ಸಮಯವನ್ನು ಪೂರ್ವ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಮೇ 27ರವರೆಗೆ 95 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 77 ಮಿ.ಮೀ. ಆಗಿದೆ. ಮಾರ್ಚ್‌ನಲ್ಲಿ 5 ಮಿ.ಮೀ. ವಾಡಿಕೆಗೆ 9 ಮಿ.ಮೀ., ಏಪ್ರಿಲ್‌ನಲ್ಲಿ 28 ಮಿ.ಮೀ.ಗೆ 28 ಮಿ.ಮೀ. ಹಾಗೂ ಮೇ 27ರವರೆಗೆ 61 ಮಿ.ಮೀ. ಪೈಕಿ 40 ಮಿ.ಮೀ. ಮಳೆ ಬಿದ್ದಿದೆ. ಕೃಷಿ ಇಲಾಖೆಯಿಂದ ಪಡೆದಿರುವ ಮಾಹಿತಿ ಪ್ರಕಾರ, ರಾಮದುರ್ಗ ತಾಲ್ಲೂಕು ಒಂದರಲ್ಲಿ ಮಾತ್ರವೇ ವಾಡಿಕೆಯಷ್ಟು ಮಳೆಯಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲೇ ಕೊರತೆ ಕಂಡುಬಂದಿದೆ.

2019 ಹಾಗೂ 2018ರಲ್ಲಿ ಇದೇ ಅವಧಿಯಲ್ಲಿ 91 ಮಿ.ಮೀ.ಗೆ 94 ಮಿ.ಮೀ. ಮಳೆಯಾಗಿತ್ತು. ಅಂದರೆ ವಾಡಿಕೆಗಿಂತಲೂ ತುಸು ಜಾಸ್ತಿಯೇ ಮಳೆ ಸುರಿದಿತ್ತು. ಈ ಬಾರಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಮಳೆಯಾಗಿಲ್ಲ. ಇದು, ಸರಾಸರಿ ಪ್ರಮಾಣದ ಮೇಲೆ ಪರಿಣಾಮ ಬೀರಿದೆ.

ADVERTISEMENT

ಹೆಸರು, ಉದ್ದು:ಈ ಬಾರಿ ಕೊರೊನಾ ಭೀತಿ ಹಾಗೂ ಲಾಕ್‌ಡೌನ್‌ ಇದ್ದಿದ್ದರಿಂದ ಹಲವು ನಿರ್ಬಂಧಗಳಿಂದಾಗಿ ಪೂರ್ವ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳು ಹಿಂದಿನ ವರ್ಷಗಳಂತೆ ಕಂಡುಬರಲಿಲ್ಲ. ಅಥಣಿ, ಸವದತ್ತಿ, ರಾಮದುರ್ಗ ತಾಲ್ಲೂಕುಗಳಲ್ಲಿ ಹೆಸರು, ಉದ್ದು ಬಿತ್ತುವುದು ಸಾಮಾನ್ಯವಾಗಿರುತ್ತದೆ. ಅಂತೆಯೇ ಗೋಕಾಕ ಮತ್ತು ಚಿಕ್ಕೋಡಿ ಭಾಗದಲ್ಲಿ ಸೋಯಾಅವರೆ ಬಿತ್ತುವುದು ಕಂಡುಬರುತ್ತದೆ. ಈ ಬಾರಿಯೂ ಅಲ್ಲಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಹವಾಮಾನ ಇಲಾಖೆಯಿಂದ ನೀಡಿದ್ದ ಮುನ್ಸೂಚನೆ ಆಧರಿಸಿ, ‘ಮೇ 28ರವರೆಗೆ ಬಿತ್ತನೆ ಕಾರ್ಯ ಕೈಗೊಳ್ಳುವುದು ಸೂಕ್ತವಲ್ಲ, ಮಳೆಯಾದರೂ ಬಿಸಿಗಾಳಿ ಇರುವುದರಿಂದ ಬೀಜ ಮೊಳೆಯಲು ತೊಂದರೆ ಆಗುತ್ತದೆ. ಹೀಗಾಗಿ, ಮಳೆಯಾಶ್ರಿತ ಪ್ರದೇಶದವರು ಈ ಅವಧಿಯಲ್ಲಿ ಬಿತ್ತನೆಗೆ ಮುಂದಾಗಬಾರದು. ನೀರಾವರಿ ವ್ಯವಸ್ಥೆ ಇರುವವರಿಗೆ ತೊಂದರೆ ಆಗುವುದಿಲ್ಲ’ ಎಂದು ಕೃಷಿ ಇಲಾಖೆಯಿಂದ ಸಲಹೆ ನೀಡಲಾಗಿದೆ.

‘ರೋಹಿಣಿ’ ಬಂದ ನಂತರ:ಮಳೆ ನಕ್ಷತ್ರದ ಪ್ರಕಾರ ಮೇ 25ರಿಂದ ಜೂನ್‌ 7ರವರೆಗಿನ ಅವಧಿಯಲ್ಲಿ ‘ರೋಹಿಣಿ’ ಮಳೆ ಆರಂಭವಾಗುವ ನಿರೀಕ್ಷೆ ಇದೆ. ಜೂನ್‌ 8ರಿಂದ ಜೂನ್‌ 21ರವರೆಗೆ ‘ಮೃಗಶಿರ’ ಮಳೆ ನಕ್ಷತ್ರವಿದೆ. ಆಗ, ಉತ್ತಮ ಮಳೆಯಾದರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ಆರಂಭವಾಗುತ್ತವೆ. ಇದಕ್ಕಾಗಿ ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧವಾಗುತ್ತಿರುವ ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮೊದಲಾದ ಪರಿಕರಗಳ ಖರೀದಿಗೆ ಮುಂದಾಗುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ತಕ್ಕಂತೆ ಕೃಷಿ ಇಲಾಖೆಯಿಂದಲೂ ಕಾಲ ಕಾಲಕ್ಕೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದೆ. ಕೋವಿಡ್–19 ಭೀತಿಯಿಂದಾಗಿ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಬಿತ್ತನೆ ಬೀಜ ಲಭ್ಯವಾಗುವ ಕೇಂದ್ರಗಳನ್ನು ಹೆಚ್ಚಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 6,80,120 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. 2,05,275 ಹೆಕ್ಟೇರ್‌ ಏಕದಳ, 56,505 ಹೆ. ದ್ವಿದಳ, 1,29,230 ಹೆ. ಎಣ್ಣೆಕಾಳುಗಳು ಹಾಗೂ 2,97,110 ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಇದೆ ಎಂದು ಕೃಷಿ ಇಲಾಖೆ ತಿಳಿಸಿದೆ.

‘ಕೃಷಿಕರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಸಿಗುವಂತಾಗಲು ಕ್ರಮ ವಹಿಸಿದ್ದೇವೆ. ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡುತ್ತಿದ್ದೇವೆ. ಪರಿಕರಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ಬಿತ್ತನೆಬೀಜ ಹಾಗೂ ರಸಗೊಬ್ಬರ ದಾಸ್ತಾನಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.