ADVERTISEMENT

ಜನವರಿಯಿಂದ ಶಾಲಾ ವಿದ್ಯಾರ್ಥಿನಿಯರಿಗೆ ಮತ್ತೆ ‘ಶುಚಿ’– ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 15:58 IST
Last Updated 4 ಡಿಸೆಂಬರ್ 2023, 15:58 IST
ದಿನೇಶ್‌ ಗುಂಡೂರಾವ್‌, ಆಹಾರ ಸಚಿವ
ದಿನೇಶ್‌ ಗುಂಡೂರಾವ್‌, ಆಹಾರ ಸಚಿವ   

ವಿಧಾನ ಪರಿಷತ್‌: ‘ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ, ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ ವಿತರಿಸುವ ‘ಶುಚಿ’ ಯೋಜನೆ ಜನವರಿ ತಿಂಗಳಿನಿಂದ ಮತ್ತೆ ಆರಂಭವಾಗಲಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ತಿಳಿಸಿದರು.

ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘2013ರಲ್ಲಿ ಆರಂಭವಾಗಿರುವ ಶುಚಿ ಯೋಜನೆಯು ಟೆಂಡರ್ ಪ್ರಕ್ರಿಯೆಯ ಲೋಪಗಳಿಂದ ಸ್ಥಗಿತವಾಗಿತ್ತು’ ಎಂದರು.

‘ಈ ಬಾರಿ ಟೆಂಡರ್‌ ವಹಿಸಿದ ಏಜೆನ್ಸಿಗಳೇ ಶಾಲೆಗಳಿಗೆ ಸ್ಯಾನಿಟರಿ ನ್ಯಾಪ್ಕಿನ್‌ ತಲುಪಿಸಲಿವೆ. ಮುಟ್ಟಿನ ಕಪ್‌ಗಳನ್ನು ವಿತರಿಸುವ ಕಾರ್ಯಕ್ರಮ ಈಗಾಗಲೇ ಚಾಲನೆ ನೀಡಲಾಗಿದೆ. ಈ ಬಗ್ಗೆ ಇನ್ನೂ ಜಾಗೃತಿ ಮೂಡಿಸಬೇಕಿದೆ’ ಎಂದರು.

ADVERTISEMENT

‘ಹದಿಹರೆಯದ ಹೆಣ್ಣು ಮಕ್ಕಳು ಸ್ಯಾನಿಟರಿ ನ್ಯಾಪ್ಕಿನ್ ಬದಲಿಗೆ ಬಟ್ಟೆಗಳನ್ನು ಬಳಸುತ್ತಿರುವುದು ಆರೋಗ್ಯ ಇಲಾಖೆಯ ಸಮೀಕ್ಷೆಯಿಂದಲೇ ಬಹಿರಂಗವಾಗಿದೆ. ಇದು ವಿವಿಧ ರೋಗಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸಬೇಕು’ ಎಂದು ತಿಪ್ಪೇಸ್ವಾಮಿ ಸಲಹೆ ನೀಡಿದರು.

‘ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆ ಕಡ್ಡಾಯ ಅಸಾಧ್ಯ’

‘ಮೂಲಭೂತ ಹಕ್ಕುಗಳ ಉಲ್ಲಂಘನೆ ಕಾರಣಕ್ಕೆ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಲು ಸಾಧ್ಯ ಇಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್‌ನಲ್ಲಿ ಹೇಳಿದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರು, ‘1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಿರುವಾಗ ಕಡ್ಡಾಯಗೊಳಿಸಲೇಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಸಚಿವರು, ‘2015ರಲ್ಲೇ ಈ ಮಸೂದೆ ಅಂಗೀಕಾರ ಆಗಿದೆ. ಆದರೆ, ಈ ಮಸೂದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಮಾತೃಭಾಷೆಯ ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಮಸೂದೆಯನ್ನು ಕೇಂದ್ರ ತಿರಸ್ಕರಿಸಿದೆ’ ಎಂದರು.

‘ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಉಲ್ಲೇಖಿಸಿ ರಾಜ್ಯದ ಮಸೂದೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅನುಮೋದನೆ ನೀಡಿಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಅವರವರಿಗೆ ಬಿಟ್ಟ ವಿಚಾರ. ಮೂಲಭೂತ ಹಕ್ಕುಗಳನ್ನು ಮೀರಿ ಜಾರಿ ಮಾಡಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಸುಳ್ಳು ಹೇಳುತ್ತಿದೆ– ವಿಪಕ್ಷ ಟೀಕೆ

ವಿಧಾನ ಪರಿಷತ್‌: ‘ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಪರವಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಸಮರ್ಥನೆ ನೀಡಿದಾಗ, ‘ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ, ‘ರಾಜ್ಯ ಬರದಿಂದ ಕಂಗೆಟ್ಟಿದ್ದು, ಅಳಿದುಳಿದ ನೀರಾವರಿ ಆಶ್ರಿತ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ’ ಎಂದರು.

ಆಗ ಉತ್ತರಿಸಿದ ಪ್ರಿಯಾಂಕ್‌, ‘ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಸರ್ಕಾರದ ಆದೇಶದಂತೆ ದಿನದಲ್ಲಿ 7 ಗಂಟೆ ಕಾಲ ತ್ರೀ ಫೇಸ್‌ ವಿದ್ಯುತ್‌ ಪೂರೈಸಲಾಗುತ್ತಿದೆ. ವಿದ್ಯುತ್‌ ಬಳಕೆ ಪ್ರಮಾಣ ಹಿಂದಿನ ವರ್ಷಕ್ಕಿಂತ ದ್ವಿಗುಣವಾಗಿರುವುದರಿಂದ ಒಂದೂವರೆ ತಿಂಗಳು ತೊಂದರೆ ಆಗಿತ್ತು’ ಎಂದರು.

ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ‘ಸುಳ್ಳು ಹೇಳುವುದಕ್ಕೂ ಮಿತಿ ಬೇಕು’ ಎಂದು ತಿವಿದರು.

‘ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ನೀರಾವರಿ ಆಧರಿಸಿ ಬೆಳೆ ಬೆಳೆಯುವವರಿಗೆ ಅನ್ಯಾಯವಾಗಿದೆ. ಏಳು ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಸರ್ಕಾರ ವಾಗ್ದಾನ ಮಾಡಿದೆ. ಆದರೆ, ಬರ ಅಧ್ಯಯನಕ್ಕೆ ಹೋಗಿದ್ದಾಗ, ಸರ್ಕಾರದ ಸಮರ್ಪಕವಾಗಿ ವಿದ್ಯುತ್‌ ಪೂರೈಸುತ್ತಿಲ್ಲ ಎನ್ನುವುದು ಮನವರಿಕೆ ಆಯಿತು’ ಎಂದು ದೂರಿದರು. 

ಅಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಜಟಾಪಟಿಗೆ ಮುಂದಾಗುತ್ತಿದ್ದಂತೆ, ಸಭಾಪತಿ ಬಸವರಾಜ ಹೊರಟ್ಟಿ, ‘ಈ ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.