ಡಿ.ಕೆ. ಶಿವಕುಮಾರ್
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: 'ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ, ಬಿಜೆಪಿಗೆ ಅದು ಇಷ್ಟವಿಲ್ಲ, ರಾಜಕಾರಣ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಸೇರಿದಂತೆ ಅನೇಕ ವಿಚಾರವಾಗಿ ನಾವು ಜೊತೆಯಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ, ಬಿಜೆಪಿಯವರಲ್ಲಿಯೇ ಪರಸ್ಪರ ವೈಮನಸ್ಸು ಇದ್ದು, ಒಗ್ಗಟ್ಟು ಇಲ್ಲವಾಗಿದೆ. ಸಮಸ್ಯೆ ಕುರಿತು ಚರ್ಚಿಸಲು ಅವರಿಗೇ ಇಷ್ಟವಿಲ್ಲ' ಎಂದರು.
ಮಹದಾಯಿ ಯೋಜನೆ ಅನುಷ್ಟಾನ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಯೋಜನೆ ಜಾರಿಗೆ ನಮ್ಮ ಸರ್ಕಾರ ಬದ್ಧವಿದೆ. ಅದರ ಟೆಂಡರ್ ಕರೆಯಲು ಈಗಾಗಲೇ ಎಲ್ಲ ಸಿದ್ಧ ಮಾಡಿಕೊಂಡಿದ್ದೇವೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಸಿಗುವ ಭರವಸೆ ಇದೆ. ಅನುಮತಿ ದೊರತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು' ಎಂದು ಹೇಳಿದರು.
'ಯೋಜನೆ ಅನುಷ್ಟಾನದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಗಮನಹರಿಸಬೇಕು. ಯಾಕೆಂದರೆ, ಯೋಜನೆಯ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಅವರು ಸಂಭ್ರಮಿಸಿದ್ದರು. ಅವರನ್ನೂ ಸಹ ನಾವು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಅವರು ಒತ್ತಡ ಹಾಕಬೇಕು' ಎಂದು ಡಿಕೆಶಿ ಅಭಿಪ್ರಾಯಪಟ್ಟರು.
'ಕೋವಿಡ್ ಸಂದರ್ಭದಲ್ಲಿ ನಡೆದ ಔಷಧಿ ಹಾಗೂ ಇತರ ಸಾಮಗ್ರಿ ಖರೀದಿಯಲ್ಲಾದ ಅವ್ಯವಹಾರದ ಕುರಿತು ರಚಿಸಲಾದ ಮೈಕೆಲ್ ಡಿ ಕುನ್ಹಾ ಆಯೋಗದ ವರದಿ ಆಧರಿಸಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.