ADVERTISEMENT

ಬೆಳಗಾವಿ ಗಡಿ ವಿವಾದ: ಕಾನೂನು ಸಮರಕ್ಕೆ ಸಿದ್ಧ ಎಂದ ಸಿಎಂ ಬೊಮ್ಮಾಯಿ

30ಕ್ಕೆ ಅಂತಿಮ ವಿಚಾರಣೆ l ಕಾನೂನು ತಜ್ಞರು, ಹಿರಿಯ ಅಧಿಕಾರಿಗಳ ಜತೆ ಸಿ.ಎಂ ಸಭೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 18:20 IST
Last Updated 27 ನವೆಂಬರ್ 2022, 18:20 IST
   

ಬೆಂಗಳೂರು: ‘ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸಮರಕ್ಕೆ ನಮ್ಮ ರಾಜ್ಯ ಎಲ್ಲ ರೀತಿಯಲ್ಲಿ ಸಿದ್ಧವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗಡಿ ವ್ಯಾಜ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೇ 30ರಂದು ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಭಾನುವಾರ ಚರ್ಚೆ ನಡೆಸಿದರು.

2004ರಲ್ಲಿ ಮಹಾರಾಷ್ಟ್ರ ಹೂಡಿರುವ ಪ್ರಕರಣದ ಬೆಳವಣಿಗೆ ಮತ್ತು 30ರಂದು ವಿಚಾರಣೆಗೆ ಬರಬಹುದಾದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.

ADVERTISEMENT

2017ರಲ್ಲಿ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಯವರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೋ, ಬೇಡವೋ, ಇದು ಯೋಗ್ಯವೇ ಎಂದು ಪ್ರಶ್ನೆ ಕೇಳಿ ಆದೇಶ ಮಾಡಿದ್ದರು. ಈ ಆದೇಶದ ಅನ್ವಯ ಯೋಗ್ಯತೆಯ ಬಗ್ಗೆ ಚರ್ಚೆಯಾಗಲಿದೆ. ಈ ಮಧ್ಯೆ, ಮಹಾರಾಷ್ಟ್ರ ಸರ್ಕಾರ 2017ರ ಪ್ರಕರಣ ವನ್ನು ಪ್ರಶ್ನಿಸಿತ್ತು.

‘ಈ ಪ್ರಕರಣದಲ್ಲಿ ರಾಜ್ಯದ ನಡೆ ಏನಿರಬೇಕು, ಸಂವಿಧಾನ ಏನು ಹೇಳುತ್ತದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಸಂವಿಧಾನ, ರಾಜ್ಯ ಪುನರ್ ವಿಂಗಡನಾ ಕಾಯ್ದೆ ಹಾಗೂ ಸತ್ಯಾಂಶ‌ಗಳು ನಮ್ಮ ಪರವಾಗಿವೆ ಎಂದು ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು‌ ಸ್ಪಷ್ಟಪಡಿಸಿ ದ್ದಾರೆ. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹಾಗೂ ಹಿರಿಯ ವಕೀಲ ಉದಯ ಹೊಳ್ಳ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಇದೇ 29ರಂದು ದೆಹಲಿಯಲ್ಲಿ ಹಿರಿಯ ವಕೀಲ ಮುಕುಲ್ ರೋಟಗಿ ಜೊತೆಗೂ ವಿಷಯಗಳನ್ನು ಚರ್ಚಿಸಲಾಗುವುದು’ ಎಂದು ಹೇಳಿದರು.

ಸರ್ವಪಕ್ಷ ಸಭೆ: ‘ವಿರೋಧ ಪಕ್ಷದ ನಾಯಕರ ಜೊತೆ ಚರ್ಚಿಸಿ, ದಿನ ನಿಗದಿ ಮಾಡಿ ಸರ್ವಪಕ್ಷ ಸಭೆ ಕರೆಯಲಾಗುವುದು’ ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.