ತುಮಕೂರು: ಗಲಭೆ ನಡೆದ ಸ್ಥಳಕ್ಕೆ ಹೋಗಿ ನಿಯಂತ್ರಿಸದ, ಸಿಬ್ಬಂದಿಗೆ ನಿರ್ದೇಶನ ನೀಡಿ, ಸರಿಯಾದ ನಿರ್ಧಾರ ತೆಗೆದುಕೊಳ್ಳದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಅನಿವಾರ್ಯವಾಗಿ ಅಮಾನತು ಮಾಡಬೇಕಾಯಿತು ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಹೋಗಿ, ತಮ್ಮ ಸಿಬ್ಬಂದಿಗೆ ನಿರ್ದೇಶನ ಕೊಟ್ಟು ಗಲಭೆ ನಿಯಂತ್ರಿಸಬೇಕಿತ್ತು. ಒಂದು ಘಟನೆ ಸಂಭವಿಸಿದ ತಕ್ಷಣ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಗೊತ್ತಿರುತ್ತದೆ. ಪರೀಕ್ಷೆ ಪಾಸಾದ ನಂತರ ಇಂತಹ ಸನ್ನಿವೇಶಗಳನ್ನು ನಿಭಾಯಿಸುವ ಬಗ್ಗೆ ತರಬೇತಿ ಕೊಟ್ಟಿರುತ್ತಾರೆ. ಇಷ್ಟು ವರ್ಷ ಕೆಲಸ ಮಾಡಿದ ಅನುಭವ ಇರುತ್ತದೆ. ಇದೆಲ್ಲವನ್ನೂ ಯೋಚಿಸಿಯೇ ಜಿಲ್ಲೆಗೆ ನೇಮಕ ಮಾಡಲಾಗುತ್ತದೆ. ಆದರೆ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ’ ಎಂದರು.
‘ಕರ್ತವ್ಯಕ್ಕೆ ಯಾವ ಸಮಯದಲ್ಲೇ ರಿಪೋರ್ಟ್ ಮಾಡಿಕೊಳ್ಳಲಿ. ಒಂದು ದಿನ, ಒಂದು ಗಂಟೆ ಎಂಬುದು ಮುಖ್ಯವಲ್ಲ. ಕೆಲಸ ಎಂದ ಮೇಲೆ ಕೆಲಸ. ಅವರೇನೂ ಪೊಲೀಸ್ ಇಲಾಖೆಗೆ ಹೊಸಬರಲ್ಲ. ಜವಾಬ್ದಾರಿ ವಹಿಸಿಕೊಂಡ ತಕ್ಷಣ ಸವಾಲುಗಳು ಎದುರಾಗುತ್ತವೆ. ತಕ್ಷಣ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ. ಈ ಘಟನೆಯಲ್ಲೂ ತಕ್ಷಣ ಸ್ಥಳಕ್ಕೆ ಹೋಗಿ ಗುಂಪು ನಿಯಂತ್ರಿಸಿದ್ದರೆ ಪರಿಸ್ಥಿತಿ ಗುಂಡು ಹಾರಿಸುವ ಹಂತಕ್ಕೆ ಹೋಗುತ್ತಿರಲಿಲ್ಲ. ಸರಿಯಾಗಿ ಜವಾಬ್ದಾರಿ ನಿರ್ವಹಿಸದ ಕಾರಣಕ್ಕೆ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.