ADVERTISEMENT

42 ಬೋಗಿಗಳಿಗೆ ಬಿಎಂಆರ್‌ಸಿಎಲ್‌ ಬೇಡಿಕೆ

ಶೀಘ್ರ ಒದಗಿಸುವುದಾಗಿ ಬಿಇಎಂಎಲ್‌ ಅಧ್ಯಕ್ಷ ದೀಪಕ್‌ಕುಮಾರ್‌ ಹೋಟಾ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:57 IST
Last Updated 2 ಆಗಸ್ಟ್ 2019, 18:57 IST
   

ಬೆಂಗಳೂರು:ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಹೆಚ್ಚುವರಿಯಾಗಿ 42 ಬೋಗಿಗಳನ್ನು ಒದಗಿಸಲು ಬೇಡಿಕೆ ಸಲ್ಲಿಸಿದೆ ಎಂದು ಬಿಇಎಂಎಲ್‌ ಅಧ್ಯಕ್ಷ ದೀಪಕ್‌ಕುಮಾರ್‌ ಹೋಟಾ ತಿಳಿಸಿದರು.

‘ಈ ಹಿಂದೆ ಬಿಎಂಆರ್‌ಸಿಎಲ್‌ 150 ಬೋಗಿಗಳ ಬೇಡಿಕೆ ಇಟ್ಟಿದ್ದು, ಇದರಲ್ಲಿ ಬಹುತೇಕ ಕೋಚ್‌ಗಳನ್ನು ಪೂರೈಸಲಾಗಿದೆ. ಕೆಲವು ಬೋಗಿಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಶೀಘ್ರದಲ್ಲಿಯೇ ಪೂರೈಸಲಾಗುವುದು’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘216 ಬೋಗಿಗಳಿಗಾಗಿ ಬೆಂಗಳೂರು ಮೆಟ್ರೊ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಭವಿಷ್ಯದಲ್ಲಿ ಒಟ್ಟು 200ರಿಂದ 300 ಬೋಗಿಗಳನ್ನು ಬಿಎಂಆರ್‌ಸಿಎಲ್‌ನಿಂದ ಬೇಡಿಕೆ ಬರುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ADVERTISEMENT

ದೇಶದೆಲ್ಲೆಡೆಯಿಂದ ಬೇಡಿಕೆ:

‘ಕೋಲ್ಕತ್ತ ಮೆಟ್ರೊ ರೈಲು ನಿಗಮದಿಂದ 18 ಬೋಗಿಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಮುಂಬೈ ಮೆಟ್ರೊಗಾಗಿ (ಎಂಆರ್‌ಎಸ್‌–1) 378 ಬೋಗಿಗಳ ನಿರ್ಮಾಣದ ಪ್ರಸ್ತಾವ ಬಂದಿದ್ದು, ಇನ್ನೂ 72 ಬೋಗಿಗಳ ನಿರ್ಮಾಣಕ್ಕೆ ಆದೇಶ ಸಿಗುವ ನಿರೀಕ್ಷೆ ಇದೆ’ ಹೋಟಾ ‌ತಿಳಿಸಿದರು.

ಆರ್‌ಆರ್‌ಟಿಎಸ್‌ಗೂ ಬೇಡಿಕೆ: ‘ದೆಹಲಿಯಲ್ಲಿ ಕ್ಷಿಪ್ರ ರಸ್ತೆ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್‌) ರೂಪಿ ಸಲಾಗುತ್ತಿದ್ದು, ಇದಕ್ಕಾಗಿ ಮಧ್ಯಮ ಗಾತ್ರದ ಅತಿ ವೇಗದ ರೈಲುಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಆರ್‌ಆರ್‌ ಟಿಎಸ್‌ನ ತಂಡ ಬಿಇಎಂ ಎಲ್‌ಗೆ ಭೇಟಿ ನೀಡಿದ್ದು, ರೈಲುಗಳ ಬೋಗಿ ನಿರ್ಮಾಣಕ್ಕೆ ಬೇಡಿಕೆ ಸಿಗುವ ನಿರೀಕ್ಷೆ ಇದೆ’ ಎಂದು ಹೋಟಾ ತಿಳಿಸಿದರು.

‘ತಂತ್ರಜ್ಞಾನ ವಿಷಯವಾಗಿ ಮತ್ತೊಂದು ಕಂಪನಿಯೊಂದಿಗೆ ಕೈಜೋಡಿಸಿ, ಈ ಆದೇಶ ಪಡೆಯುವ ಉದ್ದೇ ಶವಿದೆ. 200ಕ್ಕೂ ಹೆಚ್ಚು ಬೋಗಿಗಳ ಪ‍್ರಸ್ತಾವ ಸಲ್ಲಿಕೆಯಾಗುವ ನಿರೀಕ್ಷೆ ಇದೆ’ ಎಂದರು.

‘ಅಹಮದಾಬಾದ್‌ನಿಂದ ಮುಂಬೈ ನವರೆಗೆ ಹೈಸ್ಪೀಡ್‌ ರೈಲು ಸಂಚರಿಸಲಿದೆ. ಇದಕ್ಕೆ 240 ಬೋಗಿಗಳು ಬೇಕಾಗುವ ನಿರೀಕ್ಷೆಯಿದ್ದು, ನಮ್ಮ ಪಾಲುದಾರ ಕಂಪನಿ ಹಿತಾಚಿ ಜೊತೆಗೆ ಕೈಜೋಡಿಸಿ, 16 ಬೋಗಿಗಳನ್ನು ಒದಗಿಸುವ ಚಿಂತನೆ ಇದೆ’ ಎಂದು ಅವರು ತಿಳಿಸಿದರು.

‘ಲಘು ಮಾದರಿ ಮೆಟ್ರೊಗೆ ಆದ್ಯತೆ’
‘ಸದ್ಯ ಮೆಟ್ರೊ ಬೋಗಿಗಳ ನಿರ್ಮಾಣ ವೆಚ್ಚ ದುಬಾರಿ. ಹೀಗಾಗಿ, ಲಘು ಮಾದರಿಯ ಮೆಟ್ರೊ ರೈಲುಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈಗಿನ ಬೋಗಿಗಳಿಗೆ ಹೋಲಿಸಿದರೆ, ಲಘು ಮಾದರಿಯ ನಿರ್ಮಾಣ ವೆಚ್ಚ ಶೇ 30ರಷ್ಟು ಕಡಿಮೆ’ ಎಂದು ಡಿ.ಕೆ. ಹೋಟಾ ತಿಳಿಸಿದರು.

**
ಕೋಲ್ಕತ ಮೆಟ್ರೋ ರೈಲು ನಿಗಮದಿಂದ 18 ಬೋಗಿಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ದೇಶದೆಲ್ಲೆಡೆಯಿಂದ ಬೋಗಿಗಳಿಗಾಗಿ ಬೇಡಿಕೆ ಬರುತ್ತಿದೆ.
-ದೀಪಕ್‌ ಕುಮಾರ್‌ ಹೋಟಾ,ಬಿಇಎಂಎಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.