ADVERTISEMENT

Karnataka Budget | ಬಜೆಟ್‌ ನಿರೀಕ್ಷೆ: ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 23:31 IST
Last Updated 26 ಫೆಬ್ರುವರಿ 2026, 23:31 IST
   

‘ಮೂಲಸೌಕರ್ಯಕ್ಕೆ ಆದ್ಯತೆ ನೀಡಿ’ 

ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರ ಹಲವು ಸಮಸ್ಯೆಗಳಿಂದ ನಲುಗುತ್ತಿದೆ. ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿಗಳ ನಿರ್ಮಾಣ, ಉತ್ತಮ ಗುಣಮಟ್ಟದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಬರಗಾಲದ ಸಂದರ್ಭದಲ್ಲಿ ಅಂತರ್ಜಲ ಹೆಚ್ಚಿಸಲು ಪ್ರತಿ ಮನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಗೆ ಸೂಚಿಸಬೇಕು. ಇದರ ಜೊತೆಗೆ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಬೇಕು.

– ಪಟ್ಟಡಿ ಎ. ಬಸವರಾಜ್, ನಾಗವಾರ

‘ರಸ್ತೆ ದುರಸ್ತಿಗೆ ಒತ್ತು ನೀಡಿ’ 

ಬೆಂಗಳೂರಿನ ಬಹುತೇಕ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿವೆ. ಇದ್ದರಿಂದ ನಿತ್ಯ ವಾಹನ ಸವಾರರು ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಗಳ ದುರಸ್ತಿಗೆ ಬಜೆಟ್‌ನಲ್ಲಿ ಯೋಜನೆ ರೂಪಿಸಬೇಕು. ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿರುವ ಬೀದಿ ಬದಿಯ ವ್ಯಾಪಾರಿಗಳಿಗೆ ನಿರ್ದಿಷ್ಟ ಜಾಗ ಗುರುತಿಸಿ, ಅಲ್ಲಿಯೇ ವ್ಯಾಪಾರ ಮಾಡುವಂತೆ ಸೂಚಿಸಬೇಕು. 

ADVERTISEMENT

– ಶಾಮಾಚಾರ್, ಜ್ಞಾನಜ್ಯೋತಿ ನಗರ

‘ಸಾರ್ವಜನಿಕ ಸಾರಿಗೆ ಬಲಪಡಿಸಿ’ 

ಬೆಂಗಳೂರು ನಗರದ ಹೆಬ್ಬಾಗಿಲಾಗಿರುವ ಪೀಣ್ಯ ದಾಸರಹಳ್ಳಿ ಪ್ರದೇಶವು ಏಷ್ಯಾ ಖಂಡದ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿನ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಇಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕಿದೆ. ಈ ಭಾಗದಲ್ಲಿ ಮೆಟ್ರೊ, ಸುರಂಗ ರಸ್ತೆ ಹಾಗೂ ಮೇಲ್ಸೇತುವೆಗಳನ್ನು ನಿರ್ಮಿಸಬೇಕು. ಪಾದಾಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. 

– ವೈ.ಬಿ.ಎಚ್. ಜಯದೇವ್, ಚಿಕ್ಕಸಂದ್ರ

‘ಕಸದ ಸಮಸ್ಯೆಗೆ ಮುಕ್ತಿ ನೀಡಿ’ 

ಬೆಂಗಳೂರು ನಗರದ ಬಹುತೇಕ ಪಾದಚಾರಿ ಮಾರ್ಗಗಳು ಹಾಗೂ ರಸ್ತೆ ಬದಿಯಲ್ಲಿ ಕಸ ತಂದು ಹಾಕಲಾಗುತ್ತಿದೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಬೇಕು.

– ವಿಶಾಲಾಕ್ಷಿ ಶರ್ಮಾ, ಶೇಷಾದ್ರಿಪುರ

‘ಸುಸ್ಥಿರ ಅಭಿವೃದ್ಧಿ ಆಗಲಿ’ 

ಬೆಂಗಳೂರು ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಆದ್ದರಿಂದ ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ, ವಿದ್ಯುತ್, ಒಳ ಚರಂಡಿ, ರಸ್ತೆ, ಪರಿಸರಸ್ನೇಹಿ ಸಾರಿಗೆ, ಉದ್ಯಾನಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಶೌಚಾಲಯ, ಅತೀ ಮುಖ್ಯವಾಗಿ ಎಲ್ಲಾ ರೀತಿಯ ಮಾಲಿನ್ಯ ನಿಯಂತ್ರಣ ಮಾಡುವುದಕ್ಕೆ ಆದ್ಯತೆ ನೀಡಬೇಕು. ಬೆಂಗಳೂರಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬ್ರ್ಯಾಂಡ್‌ ಬೆಂಗಳೂರು ನಿರ್ಮಿಸಬೇಕು.

– ಎನ್. ಮುತ್ತುರಾಜ್, ವಿಜಯನಗರ 

‘ಕಸವಿಲೇವಾರಿ, ಸ್ವಚ್ಛತೆಗೆ ಆದ್ಯತೆ ನೀಡಿ’

ಇತ್ತೀಚೆಗೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಕಸವೇ ಕಾಣುತ್ತದೆ. ಖಾಲಿ ನಿವೇಶನಗಳಂತೂ ಕಸದ ತೊಟ್ಟಿಗಳಾಗಿವೆ. ಕಸ ವಿಲೇವಾರಿಯೂ ಸಹ ಸಮರ್ಪಕವಾಗಿ ಆಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಮನೆಯಲ್ಲಿಯೇ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ, ವಿಲೇವಾರಿ ಮಾಡಲು ಯೋಜನೆ ರೂಪಿಸಬೇಕು. ಬೆಂಗಳೂರು ನಗರದ ಸ್ವಚ್ಛತೆಯ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಗಮನ ಹರಿಸಬೇಕು.

– ಕೆ.ಎಂ. ರುಕ್ಮಿಣಿ, ರಾಜರಾಜೇಶ್ವರಿನಗರ

ಬಜೆಟ್‌ ನಿರೀಕ್ಷೆ ನೀವೂ ಬರೆಯಿರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು ಬಜೆಟ್‌ ಮಂಡಿಸಲಿದ್ದಾರೆ. ಮೆಟ್ರೊ, ಸುರಂಗ ರಸ್ತೆ, ಮೇಲ್ಸೇತುವೆಗಳ ನಿರ್ಮಾಣ, ರಸ್ತೆ, ಶೌಚಾಲಯ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸೇರಿದಂತೆ ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಅನುದಾನದ ಅಗತ್ಯವಿದೆ. ಜೀವನಮಟ್ಟವನ್ನು ಸುಗಮಗೊಳಿಸಲು ಸರ್ಕಾರ ಬಜೆಟ್‌ನಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು. ತಮ್ಮ ನಿರೀಕ್ಷೆಗಳು ಏನು ಎಂಬುದನ್ನು ಜನರು ಹಂಚಿಕೊಳ್ಳಬಹುದು. 50 ಪದಗಳಿಗೆ ಮೀರದಂತೆ ಬರೆದು, ಭಾವಚಿತ್ರ ಸಮೇತ ಕಳುಹಿಸಬೇಕು. ವಾಟ್ಸ್‌ಆ್ಯಪ್‌ ಸಂಖ್ಯೆ: 9606038256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.