ADVERTISEMENT

ಬೆಂಗಳೂರು ವಿವಿ: ಘಟಕ ಕಾಲೇಜುಗಳ ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:26 IST
Last Updated 13 ಮೇ 2025, 15:26 IST
<div class="paragraphs"><p>ಬೆಂಗಳೂರು&nbsp;ವಿಶ್ವವಿದ್ಯಾಲಯ</p></div>

ಬೆಂಗಳೂರು ವಿಶ್ವವಿದ್ಯಾಲಯ

   

ಬೆಂಗಳೂರು: ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ರಾಮನಾರಾಯಣ್‌ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳನ್ನು (ಆರ್‌.ಸಿ. ಕಾಲೇಜು) ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಎರಡೂ ಕಾಲೇಜಿನ ವಿದ್ಯಾರ್ಥಿಗಳು ಒತ್ತಾಯಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಸೇರ್ಪಡೆ ಮಾಡಲು ಸರ್ಕಾರ ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. 2025–26ನೇ ಸಾಲಿನ ಬಜೆಟ್‌ನಲ್ಲೂ ಘೋಷಿಸಲಾಗಿದೆ. ಘಟಕ ಕಾಲೇಜಿನಿಂದಾಗಿ ಕಾಯಂ ಅಧ್ಯಾಪಕರು ಇರುತ್ತಾರೆ. ಸಂಶೋಧನೆಗಳಿಗೆ ಉತ್ತೇಜನ ಸಿಗಲಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ ಎಂದು ಹೇಳಿದರು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ವಿಭಜನೆ ಬಳಿಕ ಸರ್ಕಾರ ತೆಗೆದುಕೊಂಡ ಮತ್ತೊಂದು ಮಹತ್ವದ ನಿರ್ಧಾರವನ್ನು ಕೆಲವರು ವಿರೋಧಿಸುತ್ತಿರುವುದು ಸರಿಯಲ್ಲ. ಎರಡೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡದ ಹೊರಗಿನ ಕೆಲ ವಿದ್ಯಾರ್ಥಿಗಳು ಘಟಕ ಕಾಲೇಜು ಸೇರ್ಪಡೆ ವಿರೋಧಿಸುತ್ತಿದ್ದಾರೆ. ಶುಲ್ಕ ಹೆಚ್ಚಳವಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 2024ರಲ್ಲಿ ನಿಗದಿಯಾಗಿರುವ ಶುಲ್ಕವನ್ನೇ ಮುಂದುವರಿಸಬೇಕು ಎಂಬ ಷರತ್ತಿನೊಂದಿಗೆ ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಹಾಗಾಗಿ, ಸರ್ಕಾರ ಇಂತಹ ದೂರುಗಳಿಗೆ ಮನ್ನಣೆ ನೀಡಬಾರದು ಎಂದು ಕೋರಿದರು.

ಘಟಕ ಕಾಲೇಜಾಗಿ ಸೇರ್ಪಡೆಯಾದರೆ ವಿದ್ಯಾರ್ಥಿವೇತನ, ಹಾಸ್ಟೆಲ್‌ ಸೌಲಭ್ಯ ಸಿಗುತ್ತದೆ. ಕಾಲೇಜುಗಳ ಹೆಸರು ಬದಲಾಗುವುದಿಲ್ಲ. ಉನ್ನತ ಶಿಕ್ಷಣ ಸುಲಭವಾಗುತ್ತದೆ. ಪದವಿ ಪಡೆದ ನಂತರ ಉದ್ಯೋಗದ ಅವಕಾಶಗಳು ಹೆಚ್ಚಾಗುತ್ತವೆ. ಸಂಪನ್ಮೂಲದ ಸಮರ್ಪಕ ಬಳಕೆಯಾಗುತ್ತದೆ. 150 ವರ್ಷಗಳ ಇತಿಹಾಸ ಇರುವ ಕಾಲೇಜಿನ ಜಾಗವೂ ಸಂರಕ್ಷಣೆಯಾಗುತ್ತದೆ ಎಂದರು.

ಐದೂವರೆ ಸಾವಿರದಷ್ಟು ವಿದ್ಯಾರ್ಥಿಗಳನ್ನು ಒಳಗೊಂಡ ಘಟಕ ಕಾಲೇಜುಗಳು ಸೇರ್ಪಡೆಯಾಗುವುದರಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಪನ್ಮೂಲ ಹೆಚ್ಚುವ ಜತೆಗೆ, ನಗರದ ಪ್ರಮುಖ ಸ್ಥಳಗಳಲ್ಲಿ ಇರುವ ಕಾಲೇಜುಗಳನ್ನು ಬಳಸಿಕೊಂಡು ಹೆಚ್ಚುವರಿ ಕೋರ್ಸ್‌ಗಳನ್ನು ಆರಂಭಿಸಬಹುದು. ಸಾಕಷ್ಟು ಅಭಿವೃದ್ಧಿ ಮಾಡಬಹುದು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.