ADVERTISEMENT

ಬೆಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರನ್ನೇ ಮರೆತು ಹಾರಿದ ವಿಮಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2023, 9:34 IST
Last Updated 10 ಜನವರಿ 2023, 9:34 IST
   

ಬೆಂಗಳೂರು: ಖಾಸಗಿ ವಿಮಾನವೊಂದು ಶಟಲ್ ಬಸ್‌ನಲ್ಲಿ ಕಾಯುತ್ತಿದ್ದ ಸುಮಾರು 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ದೆಹಲಿಗೆ ಹಾರಿದ ಘಟನೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಪ್ರಯಾಣಿಕರ ಕುರಿತು ಅಜಾಗರೂಕತೆ ತೋರಿರುವ ಗೋ ಫಸ್ಟ್‌ ವಿಮಾನಯಾನ ಸಂಸ್ಥೆಗೆ ಘಟನೆ ಕುರಿತು ವರದಿ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಕೇಳಿದೆ.

ಒಟ್ಟು 55 ಪ್ರಯಾಣಿಕರು ಜ.9ರಂದು ದೆಹಲಿಗೆ ಹೊರಟ ಗೋ ಫಸ್ಟ್‌ ವಿಮಾನ ಏರಲು ಶಟಲ್‌ ಬಸ್‌ನಲ್ಲಿ ಕಾಯುತ್ತಿದ್ದರು. ಆದರೆ ಅಜಾಗರೂಕತೆಯಿಂದ ವಿಮಾನಯಾನ ಸಂಸ್ಥೆ ಈ ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರಿದೆ. ಬಳಿಕ 53 ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಯಿತು. ಇಬ್ಬರು ಪ್ರಯಾಣಿಕರು ಇದಕ್ಕೆ ನಿರಾಕರಿಸಿದ್ದು, ತಮ್ಮ ಟಿಕೆಟ್‌ ಹಣ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ.

ಟ್ವಿಟರ್‌ನಲ್ಲಿ ಅನೇಕರು 'ಅತ್ಯಂತ ಭಯಾನಕ ಅನುಭವ' ಎಂದು ವಿಮಾನಯಾನ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಘಟನೆ ವರದಿಯನ್ನು ಕೇಳಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ವಿಮಾನ G8 116 (BLR-DEL) ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದೆ. ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಕೇವಲ ಒಂದು ಬಸ್‌ನ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಿದೆ. @GoFirstairways @JM_Scindia @PMOIndia ನಿದ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ? ಪ್ರಯಾಣಿಕರು ವಿಮಾನ ಪ್ರವೇಶಿಸಿದ್ದಾರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದಿಲ್ಲವೇ?’ ಎಂದು ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.