ಜಾರಿ ನಿರ್ದೇಶನಾಲಯ
ಬೆಂಗಳೂರು: ಠೇವಣಿದಾರರ ₹110 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಗರದ ಶುಶೃತಿ ಸೌಹಾರ್ದ ಬ್ಯಾಂಕ್‌ನ ವಿವಿಧ ಶಾಖೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ನಗರದ ವಿಲ್ಸನ್ ಗಾರ್ಡನ್, ಅಂದ್ರಹಳ್ಳಿ, ರಾಜಗೋಪಾಲನಗರ, ಚಿಕ್ಕಜಾಲದಲ್ಲಿನ ಬ್ಯಾಂಕ್‌ನ ಶಾಖೆಗಳು, ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮೈಲನಹಳ್ಳಿಯ ಶ್ರೀ ಲಕ್ಷ್ಮೀ ಸೌಹಾರ್ದ ಬ್ಯಾಂಕ್‌ಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ಆರಂಭಿಸಿದ್ದಾರೆ.
ಬ್ಯಾಂಕ್‌ನ ಅಧ್ಯಕ್ಷ ಎನ್.ಶ್ರೀನಿವಾಸಮೂರ್ತಿ, ನಿರ್ದೇಶಕಿ ಮತ್ತು ಶ್ರೀನಿವಾಸಮೂರ್ತಿ ಅವರ ಪತ್ನಿ ಧರಣಿದೇವಿ, ಕಾರ್ಯಕಾರಿ ನಿರ್ದೇಶಕಿ ಮೋಕ್ಷತಾರಾ, ಲಕ್ಷ್ಮೀ ಸೌಹಾರ್ದ ಬ್ಯಾಂಕ್‌ನ ನಿರ್ದೇಶಕಿ ರತ್ನಮ್ಮ ಅವರ ಮನೆಗಳೂ ಸೇರಿ ಒಟ್ಟು 14 ಕಡೆ ದಾಳಿ ನಡೆದಿದೆ. ಅಂದ್ರಹಳ್ಳಿಯಲ್ಲಿ ಇರುವ ಶುಶೃತಿ ಶೈಕ್ಷಣಿಕ ಟ್ರಸ್ಟ್‌ನ ಕಚೇರಿ, ಶಾಲೆ ಮತ್ತು ನರ್ಸಿಂಗ್ ಕಾಲೇಜಿನ ಕಚೇರಿಗಳಲ್ಲೂ ಶೋಧ ನಡೆಸಿದ್ದಾರೆ.
ಕಚೇರಿಗಳಲ್ಲಿ ಇದ್ದ ಸಿಬ್ಬಂದಿ, ಶ್ರೀನಿವಾಸಮೂರ್ತಿ ಅವರ ಆಪ್ತರು, ಚಾಲಕರು ಮತ್ತು ರತ್ನಮ್ಮ ಅವರನ್ನು ಪ್ರಶ್ನಿಸಲಾಗಿದೆ. ಹಲವು ಕಾಗದ ಪತ್ರಗಳು ಮತ್ತು ಹಾರ್ಡ್‌ಡಿಸ್ಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 100 ಎಕರೆಗೂ ಹೆಚ್ಚು ಕೃಷಿ ಜಮೀನಿಗೆ ಸಂಬಂಧಿಸಿದ ಕಾಗದಪತ್ರಗಳು, ಮಾರಾಟಪತ್ರಗಳು ಪತ್ತೆಯಾಗಿವೆ ಎಂದು ಮೂಲಗಳು ಖಚಿತಪಡಿಸಿವೆ.
ಠೇವಣಿದಾರರಿಗೆ ಅತಿ ಹೆಚ್ಚಿನ ಬಡ್ಡಿಯ ಆಮಿಷ ಒಡ್ಡಿ, ₹200 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಲಾಗಿತ್ತು. ಆದರೆ 2021ರಿಂದ 2022ರ ಅವಧಿಯಲ್ಲಿ ಠೇವಣಿದಾರರಿಗೆ ಬಡ್ಡಿ ಪಾವತಿ ಮಾಡಿರಲಿಲ್ಲ. ಈ ಸಂಬಂಧ ಪೊಲೀಸರಲ್ಲಿ ದೂರುಗಳು ದಾಖಲಾಗಿದ್ದವು. ಠೇವಣಿದಾರರ ಹಣವನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
ನಂತರ ಕೇಂದ್ರ ಅಪರಾಧ ದಳ ತನಿಖೆ ಆರಂಭಿಸಿತ್ತು. ಶ್ರೀನಿವಾಸಮೂರ್ತಿ, ಧರಣಿದೇವಿ ಮತ್ತು ಮೋಕ್ಷತಾರಾ ಅವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಠೇವಣಿದಾರರಿಗೆ ₹110 ಕೋಟಿ ವಂಚಿಸಿರುವುದನ್ನು ಪತ್ತೆ ಮಾಡಿದ್ದರು. 2024ರಲ್ಲಿ ಇ.ಡಿಯು ಇಸಿಐಆರ್ ದಾಖಲಿಸಿ, ತನಿಖೆ ಆರಂಭಿಸಿತ್ತು.
ಬೇರೆ ಹೆಸರಿನಲ್ಲಿ ಬ್ಯಾಂಕ್‌ಗಳು: ಶುಶೃತಿ ಬ್ಯಾಂಕ್‌ನ ಠೇವಣಿದಾರರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಶೃತಿ ಸೌಹಾರ್ದ ಬ್ಯಾಂಕ್ ಮತ್ತು ಶ್ರೀ ಲಕ್ಷ್ಮೀ ಸೌಹಾರ್ದ ಬ್ಯಾಂಕ್‌ಗಳನ್ನು ಆರೋಪಿಗಳು ಸ್ಥಾಪಿಸಿದ್ದರು. ಈ ಎರಡೂ ಬ್ಯಾಂಕ್‌ಗಳಲ್ಲಿ ತಮ್ಮ ಆಪ್ತರನ್ನು ಮುಖ್ಯಸ್ಥರು ಮತ್ತು ನಿರ್ದೇಶಕರನ್ನಾಗಿಸಿದ್ದರು ಎಂಬುದು ತನಿಖೆಯಿಂದ ಪತ್ತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈವರೆಗೆ ಶ್ರೀನಿವಾಸಮೂರ್ತಿ ಮತ್ತು ಅವರ ಕುಟುಂಬದವರನ್ನು ಮಾತ್ರ ವಿಚಾರಣೆಗೆ ಒಳಪಡಿಸಿದ್ದ ಇ.ಡಿ ಅಧಿಕಾರಿಗಳು, ಇದೇ ಮೊದಲ ಬಾರಿಗೆ ಲಕ್ಷ್ಮೀ ಸೌಹಾರ್ದ ಬ್ಯಾಂಕ್‌ನ ನಿರ್ದೇಶಕಿ ರತ್ನಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ‘ಶ್ರೀನಿವಾಸಮೂರ್ತಿ ಅವರ ಕೃಷಿ ಜಮೀನುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳನ್ನು ರತ್ನಮ್ಮ ನಡೆಸಿದ್ದರು. ಕೆಲವು ಆಸ್ತಿಗಳು ಆಕೆಯ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ’ ಎಂದು ತಿಳಿಸಿವೆ.
ವಂಚನೆಯ ಮಾರ್ಗ
*ಶುಶೃತಿ ಬ್ಯಾಂಕ್ ಠೇವಣಿದಾರರಿಂದ ಸಂಗ್ರಹಿಸಿದ ಹಣವನ್ನು ಶ್ರೀನಿವಾಸಮೂರ್ತಿ ಅವರ ಆಪ್ತರಿಗೆ, ಭದ್ರತೆ ಇಲ್ಲದೆ ಸಾಲ ನೀಡಲಾಗಿದೆ
*ಆ ಸಾಲ ವಸೂಲಾಗಿಲ್ಲ ಎಂದು ಉಲ್ಲೇಖಿಸಿ, ನಷ್ಟ ತೋರಿಸಲಾಗಿದೆ. ಆಪ್ತರಿಗೆ ನೀಡಿದ ಸಾಲಕ್ಕೆ ಪ್ರತಿಯಾಗಿ ಕೃಷಿ ಜಮೀನು, ನಿವೇಶನಗಳನ್ನು ಪಡೆದುಕೊಂಡಿದ್ದಾರೆ
*ವಾಸ್ತವದಲ್ಲಿ ಕೃಷಿ ಜಮೀನು ಮತ್ತು ನಿವೇಶನಗಳನ್ನು ಶ್ರೀನಿವಾಸಮೂರ್ತಿ ಖರೀದಿಸಿದ್ದು, ಹಣವನ್ನು ಸಾಲದ ರೂಪದಲ್ಲಿ ಅವರ ಆಪ್ತರಿಗೆ ನೀಡಲಾಗಿದೆ. ಆನಂತರ ಮಾರಾಟಗಾರರಿಗೆ ತಲುಪಿಸಲಾಗಿದೆ
*ಶುಶೃತಿ ಬ್ಯಾಂಕ್‌ನ ಹಣವನ್ನು ಹೆಚ್ಚಿನ ದರದ ಬಡ್ಡಿಯಲ್ಲಿ ಶೃತಿ ಬ್ಯಾಂಕ್ ಮತ್ತು ಲಕ್ಷ್ಮೀ ಬ್ಯಾಂಕ್‌ಗೆ ಸಾಲ ನೀಡಲಾಗಿದೆ. ಈ ಎರಡೂ ಬ್ಯಾಂಕ್‌ಗಳು ಜಮೀನು ಮತ್ತು ಮನೆ ಅಡಮಾನ ಪಡೆದು ಸಾಲ ನೀಡಿವೆ
*ಸಾಲ ವಸೂಲಾಗಿಲ್ಲ ಎಂದು ತೋರಿಸಿ, ಜಮೀನು ಮತ್ತು ಮನೆಗಳನ್ನು ಹರಾಜು ಹಾಕಿವೆ. ಆ ಸ್ವತ್ತುಗಳನ್ನು ಶ್ರೀನಿವಾಸಮೂರ್ತಿ ಅವರೇ ಖರೀದಿಸಿದ್ದಾರೆ
*ಈ ರೀತಿ ಒಟ್ಟು 22 ಸ್ಥಿರಾಸ್ತಿಗಳನ್ನು ಖರೀದಿಸಲಾಗಿದೆ. ಇವುಗಳಲ್ಲಿ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸಹಕಾರ ಇಲಾಖೆ 2024ರಲ್ಲೇ ಆದೇಶಿಸಿತ್ತು. ಈಚೆಗೆ 55 ಎಕರೆಯಷ್ಟು ಕೃಷಿ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು
ಮುಟ್ಟುಗೋಲು ತಪ್ಪಿಸಲು ಮಾರಾಟ
‘ಸಿಸಿಬಿ ಪ್ರಕರಣ ದಾಖಲಿಸಿದ ನಂತರ ಆರೋಪಿಗಳು ಹಲವು ಸ್ವತ್ತುಗಳನ್ನು ಮಾರಾಟ ಮಾಡಿದ್ದಾರೆ. ಆಸ್ತಿಗಳ ಮುಟ್ಟುಗೋಲನ್ನು ತಪ್ಪಿಸುವ ಉದ್ದೇಶದಿಂದಲೇ ಮಾರಾಟ ಮಾಡಲಾಗಿದೆ’ ಎಂದು ಇ.ಡಿ ಮೂಲಗಳು ಖಚಿತಪಡಿಸಿವೆ.
‘ಹೀಗೆ ಮಾರಾಟ ಮಾಡಿರುವ ಹಲವು ನಿವೇಶನಗಳು, ಕೃಷಿ ಜಮೀನು, ಕೈಗಾರಿಕಾ ನಿವೇಶನಗಳ ವಿವರಗಳನ್ನು ಪತ್ತೆ ಮಾಡಲಾಗಿದೆ. ಅವುಗಳು ಬೇರೆಯವರ ಹೆಸರಿನಲ್ಲಿ ಇದ್ದರೂ, ಅವುಗಳ ಕಾಗದ ಪತ್ರಗಳು ಶೃತಿ ಬ್ಯಾಂಕ್ ಮತ್ತು ಲಕ್ಷ್ಮೀ ಬ್ಯಾಂಕ್‌ಗಳಲ್ಲಿ ಪತ್ತೆಯಾಗಿವೆ. ಈ ಆಸ್ತಿ ಮಾರಾಟದಲ್ಲಿ ಪಾತ್ರ
ವಹಿಸಿದ್ದ ಮಧ್ಯವರ್ತಿಗಳು, ಆ ಕಾಗದ ಪತ್ರಗಳಲ್ಲಿ ಇರುವ ವ್ಯಕ್ತಿಗಳ ವಿಚಾರಣೆಗೆ ಸಿದ್ಧತೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.