ಸಾಂದರ್ಭಿಕ ಚಿತ್ರ
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಗುರುವಾರ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ನಕಲಿ ಅಭ್ಯರ್ಥಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ತೆ ಮಾಡಿದೆ.
ಮಲ್ಲೇಶ್ವರದ 7ನೇ ಅಡ್ಡರಸ್ತೆಯ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗಣಿತ ವಿಷಯದ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಯೊಬ್ಬರ ಮುಖಚಹರೆಯನ್ನು ಆ್ಯಪ್ ಮೂಲಕ ಪರಿಶೀಲಿಸಿದಾಗ ನಕಲಿ ಅಭ್ಯರ್ಥಿ ಎನ್ನುವುದು ದೃಢಪಟ್ಟಿದೆ.
ಪರೀಕ್ಷಾ ಕೇಂದ್ರಕ್ಕೆ ಮುಂಚಿತವಾಗಿಯೇ ಬಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಶೌಚಾಲಯಕ್ಕೆ ಹೋಗಿ, ಒಂದು ಗಂಟೆಯಾದರೂ ಹೊರ ಬಂದಿರಲಿಲ್ಲ. ಇನ್ನೇನು ಪರೀಕ್ಷೆ ಆರಂಭವಾಗಬೇಕು ಎನ್ನುವಾಗ ಹೊರ ಬಂದು ಕ್ಯೂಆರ್ ಕೋಡ್ ಇರುವ ಪ್ರವೇಶ ಪತ್ರ ತೋರಿಸಿ, ಒಳ ಹೋಗಲು ಪ್ರಯತ್ನಿಸಿದರು. ಮುಖ ಚಹರೆ ಪತ್ತೆ ಆ್ಯಪ್ ಮೂಲಕ ಅವರ ಭಾವಚಿತ್ರ ತೆಗೆದಾಗ ನಕಲಿ ಎಂಬುದು ಗೊತ್ತಾಯಿತು. ತಕ್ಷಣ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರಲಾಗಿದೆ. ಅಷ್ಟರಲ್ಲಿ ಅಭ್ಯರ್ಥಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ .ಪ್ರಸನ್ನ ಮಾಹಿತಿ ನೀಡಿದರು.
ಪ್ರಕರಣ ಕುರಿತು ವಿಡಿಯೊ ದೃಶ್ಯ ಸಮೇತ ವರದಿ ನೀಡಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಪರಿಶೀಲನೆಯ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಅಧಿಕಾರಿಗಳಿಂದ ಪರಿಶೀಲನೆ:
ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಗುರುವಾರ ಭೇಟಿ, ಇದೇ ಮೊದಲ ಬಾರಿ ಪರಿಚಯಿಸಿರುವ ಮುಖ ಚಹರೆ ಪತ್ತೆ ಆ್ಯಪ್ ಮೂಲಕ ತಪಾಸಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.