ADVERTISEMENT

ಬೆಂಗಳೂರು ಹಬ್ಬ–2026 | ಕನ್ನಡ ವಾತಾವರಣ ನಿರ್ಮಾಣ ನಮ್ಮದೇ ಹೊಣೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 19:57 IST
Last Updated 16 ಜನವರಿ 2026, 19:57 IST
<div class="paragraphs"><p>ವಿಧಾನಸೌಧದ ಮೆಟ್ಟಿಲುಗಳ ಮೇಲೆ ಡೊಳ್ಳು ಬಾರಿಸುವ ಮೂಲಕ ಸಿದ್ದರಾಮಯ್ಯ ಅವರು ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದರು</p></div>

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಡೊಳ್ಳು ಬಾರಿಸುವ ಮೂಲಕ ಸಿದ್ದರಾಮಯ್ಯ ಅವರು ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದರು

   

ಬೆಂಗಳೂರು: ‘ಕನ್ನಡ ನಮ್ಮ ನಾಡು ಮತ್ತು ತಾಯಿ ನುಡಿಯಾಗಿದ್ದು, ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಾಣದ ಹೊಣೆಯು ಕನ್ನಡಿಗರದ್ದೇ ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ‘ಬೆಂಗಳೂರು ಹಬ್ಬ–2026’ಕ್ಕೆ ಚಾಲನೆ ನೀಡಿ ಮಾತನಾಡಿದರು.

ADVERTISEMENT

‘ಬೆಂಗಳೂರು ಹಬ್ಬದ ಭಾಗವಾಗಿ, ನಮ್ಮ ನಾಡು ಮತ್ತು ನುಡಿಯನ್ನು ಪ್ರತಿನಿಧಿಸುವ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೊರಗಿನಿಂದ ಇಲ್ಲಿಗೆ ಬಂದಿರುವವರಿಗೆ ಅವುಗಳನ್ನು ಪರಿಚಯಿಸಲು ಕನ್ನಡಿಗರಿಗೆ ಸುಸಂದರ್ಭ ಬಂದೊದಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಬೆಂಗಳೂರಿನ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸಬೇಕು ಎಂದು ಪದ್ಮಿನಿ ರವಿ ಮತ್ತು ನಂದಿನಿ ಆಳ್ವ ಅವರು ಬೆಂಗಳೂರು ಹಬ್ಬ ಆರಂಭಿಸಿದ್ದರು. ಈಗ ವಿ. ರವಿಚಂದರ್‌ ಮತ್ತು ಪ್ರಶಾಂತ್‌ ಪ್ರಕಾಶ್‌ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಯೋಗ ನೀಡುತ್ತಿದೆ. ಭಿನ್ನ ಭಾಷೆ, ಧರ್ಮ, ಸಂಸ್ಕೃತಿಯ ಜನರು ಒಂದಾಗಲು ಈ ಹಬ್ಬ ವೇದಿಕೆ ಒದಗಿಸುತ್ತದೆ’ ಎಂದರು.

‘ಎಲ್ಲ ಊರುಗಳಲ್ಲಿ ನಡೆಯುವ ಜಾತ್ರೆ–ಉತ್ಸವಗಳು ಮನುಷ್ಯರು ಒಂದಾಗಬೇಕು ಎಂಬ ಸಂದೇಶವನ್ನು ಸಾರುತ್ತವೆ. ಮನುಷ್ಯರು ಪರಸ್ಪರ ಪ್ರೀತಿಸಬೇಕೆ ಹೊರತು, ದ್ವೇಷಿಸಬಾರದು. ಯಾವುದೇ ಧರ್ಮವು ದ್ವೇಷವನ್ನು ಬೋಧಿಸುವುದಿಲ್ಲ. ಹೊರರಾಜ್ಯಗಳಿಂದ ಇಲ್ಲಿಗೆ ಬಂದು ನೆಲಸಿರುವವರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕು’ ಎಂದರು.

ಕಾರ್ಯಕ್ರಮದ ನಂತರ ಡೊಳ್ಳು, ತಮಟೆ, ಅರೆ ಮೊದಲಾದ ಚರ್ಮವಾದ್ಯಗಳ ಕುಣಿತ ತಂಡಗಳು, ಪೂಜಾ ಕುಣಿತ ತಂಡಗಳ ಮೆರವಣಿಗೆಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.