ಬೆಂಗಳೂರು: ನಗರದ ಕಾಡುಗೊಂಡನ ಹಳ್ಳಿ (ಕೆಜಿ ಹಳ್ಳಿ) ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದ ಮೂವರು ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ವಿಶೇಷ ನ್ಯಾಯಾಲಯ ಎಲ್ಲರಿಗೂ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹36 ಸಾವಿರ ದಂಡ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆಂಪರಾಜು ಅವರು ಮಂಗಳವಾರ ಪ್ರಕಟಿಸಿದರು.
ಪ್ರಕರಣದ 14ನೇ ಆರೋಪಿ ಸೈಯದ್ ಇಕ್ರಮುದ್ದೀನ್ ಅಲಿಯಾಸ್ ಸೈಯದ್ ಜಮಾಲುದ್ದೀನ್, 16ನೇ ಆರೋಪಿ ಸೈಯದ್ ಅಸೀಫ್ ಬಿನ್ ಸೈಯದ್ ಅಕ್ಬರ್ ಮತ್ತು 18ನೇ ಆರೋಪಿ ಮೊಹಮದ್ ಅತೀಫ್ ಬಿನ್ ಮೊಹಮದ್ ಗೌಸ್ ಶಿಕ್ಷೆಗೆ ಗುರಿಯಾದವರು.
ಎಲ್ಲಾ ಆಪಾದಿತರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 120ಬಿ, 144, 148, 149,188, 353 ಮತ್ತು 427, ಕರ್ನಾಟಕ ಆಸ್ತಿ ನಾಶ ತಡೆ ಕಾಯ್ದೆ–1981ರ ಕಲಂ 2 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967ರ ಕಲಂ 18ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಕೋವಿಡ್ ದಿನಗಳಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ 2020ರ ಆಗಸ್ಟ್ 12ರಂದು ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2020ರ ಡಿಸೆಂಬರ್ 21ರಂದು ಎಫ್‌ಐಆರ್ ದಾಖಲಿಸಿತ್ತು. 2021ರ ಫೆಬ್ರುವರಿ 5ರಂದು ವಿಚಾರಣಾ ನ್ಯಾಯಾಲಯಕ್ಕೆ 138 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದಲ್ಲಿ ಒಟ್ಟು 199 ಜನರನ್ನು ಆರೋಪಿಗಳು ಎಂದು ಗುರುತಿಸಲಾಗಿತ್ತು ಮತ್ತು 187 ಆರೋಪಿಗಳನ್ನು ಬಂಧಿಸಲಾಗಿತ್ತು. ಘಟನೆಯಲ್ಲಿ 12 ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಸುಟ್ಟು ಹಾಕಲಾಗಿತ್ತು. ಇವುಗಳಲ್ಲಿ 5 ದ್ವಿಚಕ್ರ, ಒಂದು ಇನ್ನೋವಾ ಕಾರು ಮತ್ತು ಇತರೆ ಆರು ವಾಹನಗಳು ಜಖಂಗೊಂಡಿದ್ದವು.
ವಿಚಾರಣೆಯಲ್ಲಿ ಎ–4 ( ಆರೋಪಿ–4) ಹಬೀಬ್ ಉರ್ ರಹಮಾನ್, ಎ–5 ಪೀರ್ ಪಾಷ, 1–6 ಜಿಯಾ ಉರ್ ರಹಮಾನ್ ಮತ್ತು 1–7 ಇಮ್ರಾನ್ ಅಹಮದ್ 2021ರ ಸೆಪ್ಟೆಂಬರ್‌ನಲ್ಲಿ ಶರಣಾಗತರಾಗಿದ್ದರು. ಉಳಿದ 135 ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಮುಂದೂಡಲಾಗಿದೆ.
ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಸುದ್ದಿಯೊಂದನ್ನು ಉಲ್ಲೇಖಿಸಿ ಫಿರೋಜ್ ಪಾಷಾ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಕಾವಲ್‌ಭೈರಸಂದ್ರ ನಿವಾಸಿ ನವೀನ್ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ 2020ರ ಆಗಸ್ಟ್ 11ರ ಸಂಜೆ 6 ಗಂಟೆಗೆ ಕಮೆಂಟ್ (ಟೀಕೆ) ಮಾಡಿದ್ದರು. ಈ ಕಮೆಂಟ್‌ನಲ್ಲಿ ಪ್ರವಾದಿ ಮಹಮದ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಪ್ರಕರಣದ 14ನೇ ಆರೋಪಿ ಸೈಯದ್ ಇಕ್ರಮುದ್ದೀನ್ ನೇತೃತ್ವದಲ್ಲಿ 25ರಿಂದ 30 ಜನ 2020ರ ಆಗಸ್ಟ್ 11ರಂದು ರಾತ್ರಿ 7.30ರ ಸುಮಾರಿಗೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಪುಲಕೇಶಿ ನಗರ ಕ್ಷೇತ್ರದ ಅಂದಿನ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸೋದರಳಿಯ ನವೀನ್ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಕೂಡಲೇ ಬಂಧಿಸಬೇಕು ಎಂದು ಜೋರಾಗಿ ಘೋಷಣೆಗಳನ್ನು ಕೂಗಿದ್ದರು.
ಅದಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಜೀವನಹಳ್ಳಿ (ಡಿಜೆ ಹಳ್ಳಿ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದ ಕಾರಣ ಕೆಜಿ ಹಳ್ಳಿ ಠಾಣೆಯ ಪೊಲೀಸರು ಗುಂಪಿನ ಆಗ್ರಹಕ್ಕೆ ಮಣಿದು ಎನ್‌ಸಿಆರ್ (ಸಂಜ್ಞೇಯ ಅಪರಾಧವಲ್ಲದ ವರದಿ) ನೋಂದಣಿ ಮಾಡಿಕೊಂಡಿದ್ದರು. ಕ್ಷಣಕ್ಷಣಕ್ಕೂ ಠಾಣೆಯ ಮುಂದೆ ನೆರೆದಿದ್ದವರ ಸಂಖ್ಯೆ ಹೆಚ್ಚುತ್ತಾಹೋದ ಕಾರಣ ಮಧ್ಯರಾತ್ರಿ 1 ಗಂಟೆಗೆ 144ನೇ ಕಲಂ ಅನುಸಾರ ನಿಷೇಧಾಜ್ಞೆ ಘೋಷಿಸಲಾಗಿತ್ತು.
ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ಕಾನೂನುಬಾಹಿರವಾಗಿ ನೆರೆದಿದ್ದ ಜನರು ಏಕಾಏಕಿ ಹಿಂಸಾಕೃತ್ಯಗಳಲ್ಲಿ ತೊಡಗಿದರು. ಠಾಣೆಯ ಮೇಲೆ ಕಲ್ಲು ತೂರಿ, ಕಬ್ಬಿಣದ ರಾಡುಗಳಿಂದ ತಮ್ಮ ಕೈಗೆ ಸಿಕ್ಕ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸುತ್ತಾ, ಆಯುಧಗಳನ್ನು ಝಳಪಿಸುತ್ತಾ, ಕಂಡ ಕಂಡ ವಸ್ತುಗಳನ್ನು ಬಡಿಗೆಗಳಿಂದ ಬಡಿಯುತ್ತಾ ಠಾಣೆಯ ಮುಂದಿದ್ದ ವಾಹನಗಳನ್ನು ಜಖಂಗೊಳಿಸಿದ್ದರು. ನವೀನ್‌ನನ್ನು ಕೊಲ್ಲುವ ಉದ್ದೇಶದಿಂದ ತಮ್ಮ ಕಸ್ಟಡಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು.
ಗುಂಪಿನಲ್ಲಿದ್ದ ಕೆಲವರು ಪೊಲೀಸ್ ಠಾಣೆ ಮೇಲೆ ಪೆಟ್ರೊಲ್ ಬಾಂಬ್ ಎಸೆದು ಬೆಂಕಿ ಹಚ್ಚಿದರು. ಠಾಣೆಯಲ್ಲಿದ್ದ ಪೊಲೀಸರನ್ನು ಕೊಲ್ಲುವ ಪ್ರಯತ್ನ ನಡೆಸಿದರು. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದಕ್ಕಾಗಿ ಕೆಲವು ಪ್ರಮುಖ ಧಾರ್ಮಿಕ ನೇತಾರರನ್ನೂ ತಕ್ಷಣದ ಸಹಾಯಕ್ಕೆ ಕೋರಿದರು. ಆದರೆ, ಹರಸಾಹಸಪಟ್ಟರೂ ಉದ್ರಿಕ್ತ ಗುಂಪು ನಿಯಂತ್ರಣಕ್ಕೆ ಬಾರದೇ ಹೋಯಿತು. ಗುಂಪನ್ನು ಚದುರಿಸಲು ಪೊಲೀಸರು ಅನ್ಯ ಮಾರ್ಗವಿಲ್ಲದೆ ಗೋಲಿಬಾರ್ ನಡೆಸಿದ್ದರು. ಹೀಗಾಗಿ ಕೆಜಿ ಹಳ್ಳಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಜಯ್ ಸಾರಥಿ ನೀಡಿದ್ದ ದೂರಿನ ಅನುಸಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
‘ವಿಶ್ವಾಸ ಇಮ್ಮಡಿಯಾಗಿದೆ’ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪಿಗಳ ದುಷ್ಕೃತ್ಯ ಸಾರ್ವಜನಿಕರ ವಿಶ್ವಾಸ ಮತ್ತು ಭದ್ರತೆಯ ಪ್ರಜ್ಞೆಯನ್ನೇ ಅಲುಗಾಡಿಸಿತ್ತು. ಪೊಲೀಸರ ದಕ್ಷತೆಯ ಬಗ್ಗೆ ಸಾರ್ವಜನಿಕರ ವಿಶ್ವಾಸ ಕುಸಿಯುವಂತೆ ಮಾಡಿತ್ತು. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವ ಮೂಲಕ ನ್ಯಾಯದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಅಂತೆಯೇ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಈ ತೀರ್ಪು ಸಮರ್ಥಿಸಿದೆಪಿ.ಪ್ರಸನ್ನ ಕುಮಾರ್ ಎನ್‌ಐಎ ಪರ ವಾದ ಮಂಡಿಸಿದ್ದ ವಿಶೇಷ ಪ್ರಾಸಿಕ್ಯೂಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.