ADVERTISEMENT

Bengaluru Rains | ಅಧೋಗತಿಗೆ ತಲುಪಿದ ಬೆಂಗಳೂರು: ಡಿಕೆಶಿ ವಿರುದ್ಧ ಅಶೋಕ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2024, 10:46 IST
Last Updated 17 ಅಕ್ಟೋಬರ್ 2024, 10:46 IST
<div class="paragraphs"><p> ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ಕಳೆದೆರಡು ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಕೆರೆಗಳಾಂತಾಗಿವೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌‘ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಅರೆಕಾಲಿಕ ಬೆಂಗಳೂರು ಅಭಿವೃದ್ಧಿ ಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್‌ ಅವರು ರಸ್ತೆಗುಂಡಿ ಮುಚ್ಚಿಸುವ ಮಹತ್ಕಾರ್ಯದ ಕಾರ್ಯವೈಖರಿ ಒಂದೇ ಮಳೆಗೆ ಬಟಾಬಯಲಾಗಿದೆ. ಮಹಾದೇವಪುರದಲ್ಲಿ ನೀರಿನಲ್ಲಿ ಮುಳುಗಿರುವ ಬೈಕ್‌ ಎತ್ತುತ್ತಿರುವ ದೃಶ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಬೆಂಗಳೂರಿನ ಪರಿಸ್ಥಿತಿ ಯಾವ ಅಧೋಗತಿಗೆ ತಲುಪಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಡಿಸಿಎಂ ಡಿ.ಕೆ ಶಿವಕುಮಾರ್‌ ಅವರೇ, ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಒಂದೆರೆಡು ಫೋಟೊ, ವಿಡಿಯೊ ಹಾಕಿಬಿಟ್ಟರೆ ರಸ್ತೆ ಗುಂಡಿ ಸಮಸ್ಯೆ ಬಗೆಹರಿದು ಬಿಡುತ್ತಾ? ಒಬ್ಬ ಜವಾಬ್ದಾರಿಯುತ ಸಚಿವರು ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂದು ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು. ಅದು ಬಿಟ್ಟು ನಾಮಕಾವಸ್ತೆಗೆ ಸುಮ್ಮನೆ ಆದೇಶ ನೀಡಿ ವಾರಗಟ್ಟಲೆ ವಿದೇಶ ಪ್ರವಾಸಕ್ಕೆ ಹೊರಟುಬಿಟ್ಟರೆ, ಇಲ್ಲಿ ರಸ್ತೆ ಗುಂಡಿ ಸಮಸ್ಯೆ ಹೇಗೆ ಬಗೆಹರಿಯುತ್ತದೆ’ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.

‘ನಮ್ಮ ತೆರಿಗೆ ನಮ್ಮ ಹಕ್ಕು‘ ಎಂದು ಬೀದಿ ನಾಟಕ ಮಾಡುತ್ತೀರಲ್ಲ. ರಾಜ್ಯದ ಜಿಎಸ್‌ಡಿಪಿಗೆ ಶೇ 35–40ರಷ್ಟು ಕೊಡುಗೆ ನೀಡುವ ಬೆಂಗಳೂರಿನ ಜನತೆಗೆ ಕನಿಷ್ಠ ಪಕ್ಷ ಗುಂಡಿ ಮುಕ್ತ ರಸ್ತೆಯನ್ನಾದರೂ ಕೊಡಬೇಕಲ್ಲವೇ’ ಎಂದು ಕಿಡಿಕಾರಿದ್ದಾರೆ.

ಪ್ರತಿಪಕ್ಷಗಳು ಟೀಕೆ ಮಾಡಿದರೆ, ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತಿದರೆ, ಬೆಂಗಳೂರಿನ ಮರ್ಯಾದೆ ಕಳೆಯಬೇಡಿ ಎಂದು ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತೀರಿ. ಬೆಂಗಳೂರಿನ ಜನರಿಗೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದ್ದರೂ, ಜನಜೀವನ ಅಸ್ತವ್ಯಸ್ತಗೊಂಡಿದ್ದರು ವಿಪಕ್ಷಗಳು ಸುಮ್ಮನೆ ಕೂರಬೇಕಾ? ಅಥವಾ ನಿಮಗೆ ಬಹುಪರಾಕ್‌ ಹೇಳಬೇಕಾ? ಎಂದು ಅವರು ಗುಡುಗಿದ್ದಾರೆ.

ಇನ್ನಾದರೂ ರಸ್ತೆ ಗುಂಡಿ ಮುಚ್ಚುವ ಈ ತೇಪೆ ಹಾಕುವ ಕೆಲಸ ಸಾಕು ಮಾಡಿ. ಹೊಸದಾಗಿ ಗುಣಮಟ್ಟದ ರಸ್ತೆ ನಿರ್ಮಿಸುವ ಮೂಲಕ ಬೆಂಗಳೂರಿನ ಜನತೆ ಕಟ್ಟುವ ತೆರಿಗೆಗೆ ಋಣ ತೀರಿಸಿ ಎಂದು ಅಶೋಕ ಹೇಳಿದ್ದಾರೆ.

ಅಕಾಲಿಕ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಆಹಾರ– ಧಾನ್ಯಗಳು, ಹಣ್ಣು–ತರಕಾರಿಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು ನಾಶವಾಗಿವೆ. ಬೆಳೆ ಹಾನಿ ಸಮೀಕ್ಷೆ ನಡೆಸಿ ತಕ್ಷಣವೇ ರೈತರಿಗೆ ಪರಿಹಾರ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ.

ಈ ವರ್ಷವಾದರೂ ಉತ್ತಮ ಫಸಲು ಬರಬಹುದು ಎಂಬ ನೀರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ‘ಎಕ್ಸ್‌’ ಮೂಲಕ ಹೇಳಿದ್ದಾರೆ.

ಕಳೆದ ವರ್ಷ ಬರ ಪರಿಸ್ಥಿತಿ ಇದ್ದಾಗ ಸರಿಯಾದ ಸಮಯಕ್ಕೆ ಸಮೀಕ್ಷೆ ನಡೆಸದೆ, ರಾಜಕೀಯ ಮಾಡುವುದರಲ್ಲೇ ಕಾಲಹರಣ ಮಾಡಿದ್ದ ಕಾಂಗ್ರೆಸ್‌ ಸರ್ಕಾರ, ಈಗಲಾದರೂ ಸರಿಯಾದ ಸಮಯಕ್ಕೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಕಾಲಕ್ಕೆ ಪರಿಹಾರ ರೈತರ ಕೈಸೇರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಕಳೆದ 15 ತಿಂಗಳಲ್ಲಿ 1,500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಇನ್ನಷ್ಟು ರೈತರು ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡುವ ಮುನ್ನ ಸೂಕ್ತಪರಿಹಾರ ಘೋಷಿಸಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ ಗುರುವಾರ ಮಾಧ್ಯಮಗಳಲ್ಲಿ ಸರ್ಕಾರದ ಸಾಧನೆಯ ಕುರಿತು ಜಾಹಿರಾತು ಪ್ರಕಟಿಸಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಅಶೋಕ ದೂರಿದ್ದಾರೆ. ‘ಒಂದು ವೇಳೆ ವಾಲ್ಮೀಕಿ ಜಯಂತಿಗೆ ಶುಭಾಶಯ ಕೋರುವ ಉದ್ದೇಶ ಮಾತ್ರ ಇದಿದ್ದರೆ ಸರ್ಕಾರದ ಸಾಧನೆಗಳು ಮುಖ್ಯಮಂತ್ರಿ ಉಪಮುಖ್ಯಮಂತ್ರಿಯ ಭಾವಚಿತ್ರಗಳಿಲ್ಲದೇ ಕೇವಲ ಶುಭಾಶಯ ಕೋರುವ ಜಾಹಿರಾತು ಪ್ರಕಟಿಸಬಹುದಿತ್ತು. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿಯೇ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.