
ದೆಹಲಿಯಲ್ಲಿ ಭಾರಿ ಸ್ಫೋಟ: ಬೆಂಗಳೂರು ಸೇರಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ
ಬೆಂಗಳೂರು: ದೆಹಲಿಯಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ್ದರಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರಿನ ಮೆಟ್ರೊ ನಿಲ್ದಾಣಗಳು, ಬಸ್ ನಿಲ್ದಾಣಗಳು, ಭಾರತೀಯ ವಿಜ್ಞಾನ ಸಂಸ್ಥೆ, ಇಸ್ರೊ, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೈಸೂರು, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಆಯಾ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಗೃಹ ಇಲಾಖೆ ಸೂಚಿಸಿದೆ.
ಗಸ್ತು ಹೆಚ್ಚಿಸಬೇಕು, ಅನುಮಾನವಾಗಿ ಓಡಾಟ ನಡೆಸುವ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಬೇಕೆಂದು ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಗರದಲ್ಲಿ ನಾಕಾ ಬಂದಿ ಹೆಚ್ಚಿಸಲಾಗಿದೆ. ಟೋಲ್ ಹಾಗೂ ನಗರ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುವಂತೆ ಸೂಚಿಸಲಾಗಿದೆ. ನಗರ ಕಮಿಷನ್‌ರೇಟ್ ವ್ಯಾಪ್ತಿಯ 11 ವಿಭಾಗಳಲ್ಲೂ ನಿಗಾ ವಹಿಸುವಂತೆ ಆಯಾ ವಿಭಾಗದ ಡಿಸಿಪಿಯವರಿಗೆ ಸೂಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.