ಬೆಂಗಳೂರು ಕಾಲ್ತುಳಿತ
–ರಾಯಿಟರ್ಸ್ ಚಿತ್ರ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಆರೋಪಿಗಳಾಗಿರುವ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುನೀಲ್ ಮ್ಯಾಥ್ಯೂ ಮತ್ತಿತರರು, ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ.
ಈ ಸಂಬಂಧ ನಿಖಿಲ್ ಸೋಸಲೆ ಮತ್ತು ಸುನಿಲ್ ಮ್ಯಾಥ್ಯೂ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ಮನವಿ ಆಲಿಸಿದ ನ್ಯಾಯಪೀಠ, ‘ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಮತ್ತು ವಾಪಸಾದ ಬಳಿಕ ತನಿಖಾಧಿಕಾರಿಗೆ ಮಾಹಿತಿ ಒದಗಿಸಬೇಕು’ ಎಂದು ನಿರ್ದೇಶಿಸಿ ಪ್ರವಾಸಕ್ಕೆ ಅನುಮತಿ ನೀಡಿ ಆದೇಶಿಸಿತು.
‘ಸೆಪ್ಟೆಂಬರ್ 5ರಿಂದ ಸೆ.9ರವರೆಗೆ ಮುಂಬೈಗೆ ತೆರಳಲು ಅನುಮತಿ ನೀಡಬೇಕು’ ಎಂದು ನಿಖಿಲ್ ಸೋಸಲೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ನಿಖಿಲ್ ಸೋಸಲೆ, ಸುನಿಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಶಮಂತ್ ಮಾವಿನಕೆರೆ ಅವರಿಗೆ ತಾತ್ಕಾಲಿಕ ಪ್ರವಾಸಕ್ಕೆ ಅನುಮತಿ ಕಲ್ಪಿಸಿದೆ. ಆರೋಪಿಗಳ ಪರ ಹೈಕೋರ್ಟ್ ವಕೀಲರಾದ ರಘುರಾಮ್ ಕದಂಬಿ ಮತ್ತು ಸೂರಜ್ ಸಂಪತ್ ಹಾಗೂ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಟಿ.ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.