ಬೆಂಗಳೂರು ಕಾಲ್ತುಳಿತ
–ರಾಯಿಟರ್ಸ್ ಚಿತ್ರ
ಬೆಂಗಳೂರು: ಆರ್‌ಸಿಬಿ ಗೆಲುವಿನ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಯ ತನಿಖೆಗೆ ರಚಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರ ಏಕಸದಸ್ಯ ವಿಚಾರಣಾ ಆಯೋಗ, ಪೊಲೀಸರ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಿದ್ದು, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಿದೆ.
ಎರಡು ಸಂಪುಟಗಳನ್ನು ಒಳಗೊಂಡ ವರದಿಯನ್ನು ಆಯೋಗವು ಮುಖ್ಯಮಂತ್ರಿಗೆ ಶುಕ್ರವಾರ ಸಲ್ಲಿಸಿತ್ತು. ಆಯೋಗ ನೀಡಿದ ವರದಿಯನ್ನು ಜುಲೈ 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಚರ್ಚಿಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ವರದಿಯಲ್ಲಿನ ಕೆಲ ಪುಟಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ಘಟನೆಗೆ ಪೊಲೀಸರ ಜತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಹಾಗೂ ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ವೈಫಲ್ಯವೂ ಕಾರಣ. ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಆಯೋಜನೆಗೆ ಒತ್ತಡ ಮಾಡಿದ್ದಾರೆ. ಹೊಣೆಗಾರಿಕೆ ನಿಭಾಯಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಈ ಎಲ್ಲರ ವಿರುದ್ಧವೂ ಕ್ರಮಕೈಗೊಳ್ಳಬಹುದು ಎಂದು ಆಯೋಗ ಶಿಫಾರಸು ಮಾಡಿದೆ.
ಕಾಲ್ತುಳಿತ ಪ್ರಕರಣದ ಕಾರಣಗಳನ್ನು ಪತ್ತೆ ಮಾಡಲು ಮ್ಯಾಜಿಸ್ಟ್ರೀಯಲ್ ತನಿಖೆ, ಸಿಐಡಿ ತನಿಖೆ ಜತೆಗೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದ ಏಕಸದಸ್ಯ ಆಯೋಗವನ್ನೂ ರಾಜ್ಯ ಸರ್ಕಾರ ರಚಿಸಿತ್ತು. ಮ್ಯಾಜಿಸ್ಟ್ರೀಯಲ್ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆಯೋಗವೂ ಒಂದು ತಿಂಗಳಲ್ಲಿ ವರದಿ ಸಲ್ಲಿಸಿದೆ.
ಕ್ರೀಡಾಂಗಣದ ಒಳಗೆ ನಿಯೋಜಿಸಿದ್ದ ಪೊಲೀಸರ ಸಂಖ್ಯೆ 79
ಕ್ರೀಡಾಂಗಣದ ಹೊರಗೆ ಪೊಲೀಸ್, ಆಂಬುಲೆನ್ಸ್‌ಗಳೂ ಇರಲಿಲ್ಲ
ಮಧ್ಯಾಹ್ನ 3.25ಕ್ಕೆ ಕಾಲ್ತುಳಿತ, ಪೊಲೀಸ್ ಕಮಿಷನರ್‌ಗೇ ಮಾಹಿತಿ ಸಿಕಿದ್ದು ಸಂಜೆ 5.30ಕ್ಕೆ
ಜಂಟಿ ಪೊಲೀಸ್ ಕಮಿಷನರ್ ಕ್ರೀಡಾಂಗಣಕ್ಕೆ ಬಂದಿದ್ದು ಸಂಜೆ 4ಕ್ಕೆ
ನಾಲ್ಕು ಸಂಸ್ಥೆಗಳ ಕರ್ತವ್ಯ ಲೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.