ADVERTISEMENT

ಉಪನಗರ ರೈಲು: ಕೇಂದ್ರದ ಅನುಮೋದನೆ

₹ 19,000 ಕೋಟಿ ಒದಗಿಸಲು ಸಂಪುಟ ಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 19:31 IST
Last Updated 7 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ರೂಪಿಸಲಾಗಿರುವ ಉಪನಗರ ರೈಲು ಯೋಜನೆಯ ಸಾಕಾರಕ್ಕೆ ಅಗತ್ಯವಿರುವ ₹19,000 ಕೋಟಿ ಅನುದಾನ ಒದಗಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯು, 148.17 ಕಿಲೋ ಮೀಟರ್‌ ಅಂತರದ ಈ ಯೋಜನೆಗೆ ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ.ಆದರೆ, ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆ ಮತ್ತು ವಿಧಾನಸಭೆಯ ಎರಡು ಸ್ಥಾನಗಳ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ, ಸಂಪುಟ ಸಭೆಯ ನಿರ್ಧಾರ ಕುರಿತು ಅಧಿಕೃತ ಘೋಷಣೆಯನ್ನು ಮುಂದೂಡಲಾಗಿದೆ.

ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಹೇಳಿಕೆ ನೀಡಲಾಗದು ಎಂದರು.

ADVERTISEMENT

ಕಳೆದ ಫೆಬ್ರುವರಿಯಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಮೀಸಲಿಡುವ ಮೂಲಕ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿತ್ತು.

ಯೋಜನೆಗೆ ಬೇಕಾದ ಶೇ 20ರಷ್ಟು ಅನುದಾನವನ್ನು ಕೇಂದ್ರ ಒದಗಿಸಲಿದ್ದು, ಶೇ 60ರಷ್ಟು ಅನುದಾನವನ್ನು ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಪಡೆಯಲಾಗುವುದು. ರಾಜ್ಯ ಸರ್ಕಾರವು ಬಾಕಿ ಶೇ 20ರಷ್ಟು ಅನುದಾನ ಭರಿಸಲಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ವೇಳೆ ಘೋಷಿಸಿದ್ದರು.

ಯೋಜನೆ ಸಂಬಂಧ 37 ವರ್ಷಗಳಿಂದ ರಾಜ್ಯ ಸರ್ಕಾರ ಸಲ್ಲಿಸಿದ್ದ ಬೇಡಿಕೆಗೆ 2018ರಲ್ಲಿ ಸಮ್ಮತಿ ನೀಡಿದ್ದ ಕೇಂದ್ರವು, ಅನುಷ್ಠಾನಕ್ಕೆ ಒಲವು ತೋರಿತ್ತು. ಆದರೆ, ಬೆಂಗಳೂರು ಮೆಟ್ರೋ ಮಾರ್ಗದಲ್ಲಿನ ಗೊಂದಲದಿಂದಾಗಿ ವಿಳಂಬವಾಗಿತ್ತು. ಅಂತಿಮವಾಗಿ ರೈಲ್ವೆ ಮಂಡಳಿಯು 2019ರ ನವೆಂಬರ್‌ನಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದರಿಂದ ಹಣಕಾಸು ಸಚಿವಾಲಯದ ಅನುಮೋದನೆ ದೊರೆತಿತ್ತು.


ಯೋಜನೆಯ ಮಾರ್ಗಕ್ಕೆ ಸಂಬಂಧಿಸಿದಂತೆ ಕೆಲ ಮಾರ್ಪಾಡುಗಳೊಂದಿಗೆ ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದ್ದ ರೈಲ್ವೆ ಮಂಡಳಿಯು, ನೆಲಮಟ್ಟದ ಒಟ್ಟು 57 ನಿಲ್ದಾಣಗಳಿಗೆ ಅನುಮತಿ ನೀಡುವ ಮೂಲಕ 24 ನಿಲ್ದಾಣಗಳನ್ನು ಕೈಬಿಡುವಂತೆ ಸೂಚಿಸಿತ್ತು. ಅಲ್ಲದೆ, ಎತ್ತರದ ನಿಲ್ದಾಣಗಳ ಸಂಖ್ಯೆಯನ್ನು 31 ರಿಂದ 22 ಕ್ಕೆ ಇಳಿಸಿತ್ತು.

‘ಮೆಟ್ರೋ ಸೌಲಭ್ಯ ಇರುವ ಕಡೆ ಉಪನಗರ ರೈಲು ಯೋಜನೆ ಬೇಡ’ ಎಂಬ ಷರತ್ತನ್ನು ಸಡಿಲಗೊಳಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ಪುರಸ್ಕರಿಸಿದ್ದ ಮಂಡಳಿ, ಯೋಜನೆಯ ಅನುಷ್ಠಾನಕ್ಕಾಗಿ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ (ಎಸ್‌ಪಿವಿ) ಸ್ಥಾಪಿಸಲಿದೆ.

ಬೆಂಗಳೂರು ನಗರ ನಿಲ್ದಾಣ– ರಾಜಾನುಕುಂಟೆ, ಕೆಂಗೇರಿ– -ವೈಟ್‌ಫೀಲ್ಡ್, ನೆಲಮಂಗಲ– -ಬೈಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ– ದೇವನಹಳ್ಳಿಗಳು ಯೋಜನೆ ಅಡಿ ಸಂಪರ್ಕ ಸಾಧಿಸಲಿವೆ.

ಯಶವಂತಪುರ, ಕೆಂಗೇರಿ, ಕಂಟೋನ್ಮೆಂಟ್, ವೈಟ್‌ಫೀಲ್ಡ್, ಕೆ.ಆರ್. ಪುರ, ಬೈಯಪ್ಪನಹಳ್ಳಿ, ಜ್ಞಾನಭಾರತಿ ಮತ್ತು ನಾಯಂಡಹಳ್ಳಿ ನಿಲ್ದಾಣಗಳು ಸೇರಿದಂತೆ ಕನಿಷ್ಠ 10 ಮೆಟ್ರೋ ನಿಲ್ದಾಣಗಳೊಂದಿಗೆ ಉಪನಗರ ರೈಲು ನಿಲ್ದಾಣಗಳು ಸಂಪರ್ಕ ಸಾಧಿಸಲಿವೆ.

ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮತ್ತಿತರ ನಗರಗಳ ಜನತೆಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.