ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆತನ ಪತ್ನಿ ನಿಖಿತಾ ಸಿಂಘಾನಿಯಾ ಸೇರಿದಂತೆ ಮೂವರಿಗೆ 29ನೇ ಸಿಟಿ ಸಿವಿಲ್ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಜನವರಿ 4ರಂದೇ ಜಾಮೀನು ಅರ್ಜಿಯನ್ನು ಇತ್ಯರ್ಥಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಇದಕ್ಕೂ ಮುನ್ನ ಜಾಮೀನು ಬಗ್ಗೆ ವಾದ, ಪ್ರತಿವಾದ ಆಲಿಸಿದ್ದ ನ್ಯಾಯಾಲಯವು, ಜಾಮೀನು ಅರ್ಜಿ ಪುರಸ್ಕರಿಸಿ, ಮೂವರು ಆರೋಪಿತರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಭಾನುವಾರದ ರಜೆಯ ಕಾರಣ ಆರೋಪಿಗಳು ಸೋಮವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರತ್ ಹಳ್ಳಿ ಪೊಲೀಸರಿಂದ ಬಂಧಿತರಾಗಿದ್ದ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಹಾಗೂ ಬಾಮೈದ ಅನುರಾಗ್ ಸಿಂಘಾನಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು. ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ಅಭಿಯೋಜಕಿ ಭಾಗ್ಯಲಕ್ಷ್ಮೀ ಅವರು ಆರೋಪಿತರಿಗೆ ಜಾಮೀನು ನೀಡಬಾರದೆಂದು ತಕರಾರು ಅರ್ಜಿ ಸಲ್ಲಿಸಿ ವಾದ ಮಂಡಿಸಿದ್ದರು.
ಪತ್ನಿ ಹಾಗೂ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮರಣ ಪತ್ರ ಬರೆದು ಡಿಸೆಂಬರ್ 9ರಂದು ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ 108ರ ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡಿ.20ರಂದು ನಿಖಿತಾಳನ್ನು ಹರಿಯಾಣದ ಗುರುಗ್ರಾಮ ಹಾಗೂ ತಾಯಿ ಹಾಗೂ ಸಹೋದರರನ್ನು ಉತ್ತರಪ್ರದೇಶದ ಪ್ರಯಾಗ್ರಾಜ್ನ ಹೋಟೆಲ್ವೊಂದರಲ್ಲಿ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.