ವಿಧಾನಸೌಧ
ಬೆಂಗಳೂರು: ರಾಷ್ಟ್ರಪತಿ ಭವನ ಮತ್ತು ಸಂಸತ್ ಕಟ್ಟಡಗಳಿಗೆ ಇರುವಂತೆ, ವಿಧಾನಸೌಧಕ್ಕೂ ‘ಗೈಡೆಡ್ ಟೂರ್’ (ಪ್ರವಾಸ ಮಾರ್ಗದರ್ಶಿ) ವ್ಯವಸ್ಥೆ ಕಲ್ಪಿಸಿ, ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ.
‘ಗೈಡೆಡ್ ಟೂರ್’ ವ್ಯವಸ್ಥೆ ಕಲ್ಪಿಸಲು ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅನುಮತಿ ನೀಡಿದೆ.
ಸಾರ್ವತ್ರಿಕ ರಜಾ ದಿನಗಳಲ್ಲಿ ಮಾತ್ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ವ್ಯವಸ್ಥೆ ಇರಲಿದೆ.
ವಿಧಾನಸೌಧ ಕಟ್ಟಡಕ್ಕೆ ಇತ್ತೀಚೆಗೆ ಶಾಶ್ವತ ದೀಪಾಲಂಕಾರ ಮಾಡಲಾಗಿದೆ. ಇದರಿಂದ, ಕಟ್ಟಡದ ಸೌಂದರ್ಯ ಹೆಚ್ಚಾಗಿದ್ದು, ಪ್ರವಾಸಿಗರು ವಿಧಾನಸೌಧ ವೀಕ್ಷಿಸಲು ಬರುತ್ತಿದ್ದಾರೆ. ಈ ವ್ಯವಸ್ಥೆ ಕಲ್ಪಿಸಿದರೆ ದೇಶೀಯ ಪ್ರವಾಸಿಗರಷ್ಟೇ ಅಲ್ಲದೆ, ವಿದೇಶಿಯರೂ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧ ವೀಕ್ಷಿಸಲು ಬರುವ ನಿರೀಕ್ಷೆಯಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಸ್ತಾವದಲ್ಲಿ ವಿವರಿಸಿದೆ.
ಡಿಪಿಎಆರ್ ಷರತ್ತು: ವಿಧಾನಸೌಧ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ತಲಾ 30 ಜನರ ತಂಡಗಳಾಗಿ ಮಾಡಿ, ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಪ್ರತಿ ತಂಡಗಳ ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಅಧಿಕಾರಿಗಳನ್ನು ನೇಮಿಸಬೇಕು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರನ್ನು ಉಸ್ತುವಾರಿ ಅಧಿಕಾರಿಯಾಗಿ ನೇಮಿಸಬೇಕು. ಪ್ರವಾಸಿಗರ ಸಂಖ್ಯೆ ಮತ್ತು ವಿವರವನ್ನು ಆಯಾ ದಿನ ವಿಧಾನಸೌಧದ ಭದ್ರತಾ ವಿಭಾಗಕ್ಕೆ ಸಲ್ಲಿಸಬೇಕು. ಈ ವ್ಯವಸ್ಥೆಗೆ ಅವಕಾಶ ಮಾಡಿಕೊಡಲು ಪ್ರವಾಸಿಗರು ಆನ್‌ಲೈನ್ ಮೂಲಕ ಟಿಕೆಟ್ ಪಡೆಯಲು ತಂತ್ರಾಂಶ ಅಭಿವೃದ್ಧಿಪಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ಡಿಪಿಎಆರ್ ಸೂಚಿಸಿದೆ.
ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ಶುಲ್ಕ ಜನಸ್ನೇಹಿ ಆಗಿರಬೇಕು. ಪ್ರವೇಶ ಶುಲ್ಕದಲ್ಲಿ ನಿರ್ದಿಷ್ಟ ಮೊತ್ತವನ್ನು ಸರ್ಕಾರದ ಖಾತೆಗೆ ಜಮೆ ಮಾಡಬೇಕು. ವಿಧಾನಸೌಧದ ಭದ್ರತೆಗೆ ಸಂಬಂಧಿಸಿದಂತೆ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರವಾಸಿಗರ ಅಧಿಕೃತ ಗುರುತಿನ ಚೀಟಿ ಪರಿಶೀಲಿಸಿ, ಪ್ರವೇಶ ನೀಡಬೇಕು. ಪ್ರವಾಸಿಗರ ಪರಿವೀಕ್ಷಣೆಯ ಕುರಿತು ರೂಟ್ ಮ್ಯಾಪ್ ತಯಾರಿಸಿ ಅನುಮತಿ ಪಡೆದುಕೊಳ್ಳಬೇಕು.
ವೀಕ್ಷಣೆಗೆ ಬರುವವರಿಗೆ ಸೂಚನೆ: ವಿಧಾನಸೌಧದ ಆವರಣದ ಸ್ವಚ್ಛತೆ ಕಾಪಾಡಲು ಬದ್ಧರಾಗಿರಬೇಕು. ಡ್ರೋನ್ ಕ್ಯಾಮೆರಾ ಬಳಸಲು ಅವಕಾಶ ಇಲ್ಲ. ಪರಿವೀಕ್ಷಣೆಯ ಸಂದರ್ಭದಲ್ಲಿ ಕುಡಿಯುವ ನೀರು ಹೊರತುಪಡಿಸಿ ಇತರ ಯಾವುದೇ ಆಹಾರ ತಿಂಡಿ, ತಿನಿಸು ತರಬಾರದು. ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗುವುದು. ವಿಧಾನಸೌಧ ಆವರಣದಲ್ಲಿ ವಾಹನ ನಿಲುಗಡೆಗೂ ಅವಕಾಶ ಇಲ್ಲ ಎಂದೂ ಡಿಪಿಎಆರ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.