ADVERTISEMENT

ವಿದ್ಯುತ್‌ ಗ್ರಾಹಕರೇ ಸೈಬರ್ ವಂಚಕರ ಗುರಿ

45 ದಿನದಲ್ಲಿ ಹಣ ಕಳೆದುಕೊಂಡ 62 ಗ್ರಾಹಕರು, 8 ಜಿಲ್ಲೆಗಳಲ್ಲಿ ವಂಚನೆ ಬೆಳಕಿಗೆ

ಅದಿತ್ಯ ಕೆ.ಎ.
Published 16 ಸೆಪ್ಟೆಂಬರ್ 2022, 19:31 IST
Last Updated 16 ಸೆಪ್ಟೆಂಬರ್ 2022, 19:31 IST
ವಿದ್ಯುತ್‌ ಗ್ರಾಹಕರೇ ಸೈಬರ್ ವಂಚಕರ ಗುರಿ
ವಿದ್ಯುತ್‌ ಗ್ರಾಹಕರೇ ಸೈಬರ್ ವಂಚಕರ ಗುರಿ   

ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ವಿದ್ಯುತ್‌ ಗ್ರಾಹಕರಿಗೆ ಸೈಬರ್‌ ಕಳ್ಳರು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, 45 ದಿನಗಳಲ್ಲಿ ಎಂಟು ಜಿಲ್ಲೆಗಳ 62 ಮಂದಿ ಗ್ರಾಹಕರು ಮೋಸಕ್ಕೆ ಒಳಗಾಗಿದ್ದಾರೆ.

ಸೈಬರ್‌ ವಂಚಕರ ಹಾವಳಿಯಿಂದ ಬೆಸ್ಕಾಂ ಗ್ರಾಹಕರು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರು ನಗರ–ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ವ್ಯಾಪ್ತಿಯನ್ನು ಬೆಸ್ಕಾಂ ಒಳಗೊಂಡಿದೆ. ಈ ಜಿಲ್ಲೆಗಳ ಗ್ರಾಹಕರಿಗೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಿಂದ ಅಪರಿಚಿತರಿಂದ ಕರೆಗಳು ಬರುತ್ತಿವೆ. ಅದನ್ನೇ ನಂಬಿ ದಾಖಲೆ ನೀಡುವ ಗ್ರಾಹಕರು ಕ್ಷಣಾರ್ಧದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ.

ADVERTISEMENT

ಜೂನ್‌, ಜುಲೈನಲ್ಲಿ 16 ಮಂದಿ ವಂಚನೆಗೆ ಒಳಗಾಗಿದ್ದರು. ಆಗಸ್ಟ್‌ನಲ್ಲಿ 53 ಹಾಗೂ ಸೆಪ್ಟೆಂಬರ್‌ 15ರ ವರೆಗೆ 9 ಮಂದಿ ಸೈಬರ್‌ ವಂಚಕರ ಬಲೆಗೆ ಬಿದ್ದು, ಹಣ ಕಳೆದುಕೊಂಡಿದ್ದಾರೆ.

‘ವಿದ್ಯುತ್‌ ಬಿಲ್‌ ಪಾವತಿ ಆಗಿಲ್ಲ. ತಕ್ಷಣ ಬಿಲ್‌ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ ಮಾಡುತ್ತೇವೆ...’ ಎಂದು ಕರೆ ಅಥವಾ ಎಸ್‌ಎಂಎಸ್‌ ಮಾಡಿ, ಗ್ರಾಹಕರಿಂದ ತಮ್ಮ ಖಾತೆಗೆ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದಾರೆ ಸೈಬರ್‌ ವಂಚಕರು.

‘ಆನ್‌ಲೈನ್‌ ವಂಚಕರ ಜಾಲವು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸೈಬರ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕರೆಯ ಮೂಲ ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಇದರಿಂದ ಬೆಸ್ಕಾಂ ಬಿಲ್‌ ಪಾವತಿ ಸಹ ವಿಳಂಬವಾಗುತ್ತಿದೆ’ ಎಂದು ಬೆಸ್ಕಾಂ ಗ್ರಾಹಕ ಸೇವಾ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

‘ಬೆಸ್ಕಾಂನಿಂದ ಬಿಲ್‌ ಪಾವತಿ ಸಂಬಂಧ ಕರೆಯಾಗಲಿ, ಎಸ್‌ಎಂಎಸ್‌ ಆಗಲಿ ಮಾಡುವುದಿಲ್ಲ. ಆದರೆ, ವಂಚಕರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತುಕತೆ ನಡೆಸಿ ಆನ್‌ಲೈನ್‌ನಲ್ಲಿ ಬಿಲ್‌ ಪಾವತಿಸುವಂತೆ ನಂಬಿಸುತ್ತಿದ್ದಾರೆ. ಲಿಂಕ್‌ ಕಳುಹಿಸಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ಧಾರೆ’ ಎಂದು ಬೆಸ್ಕಾಂನ ಗ್ರಾಹಕ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಎಸ್.ಆರ್. ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಸ್ಕಾಂನ ಪಾವತಿ ಕೇಂದ್ರಗಳ ಮೂಲಕವೇ ಗ್ರಾಹಕರು ಹಣ ಪಾವತಿಸಬೇಕು. ಬೆಸ್ಕಾಂ ಸಿಬ್ಬಂದಿಯ ಮಾಹಿತಿ ಆಧರಿಸಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದು ಸೈಬರ್‌ ಅಪರಾಧ ವಿಭಾಗದ ಪೊಲೀಸ್‌ ಮೂಲಗಳು ತಿಳಿಸಿವೆ.

‘ಸಹಾಯವಾಣಿ’ಗೆ ಕರೆ ಮಾಡಿ ಕಣ್ಣೀರು

‘ಹಣ ಕಳೆದುಕೊಂಡವರು ನಿತ್ಯ ಸಹಾಯವಾಣಿಗೆ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಸಹಾಯ ಕೋರಿ ಇತ್ತೀಚೆಗೆ ಕರೆ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಮೊತ್ತದ ಬಿಲ್‌ ಪಾವತಿದಾರರನ್ನೇ ವಂಚಕರು ಗುರಿಯಾಗಿಸಿ ಹಣ ಲಪಟಾಯಿಸುತ್ತಿದ್ದಾರೆ’ ಎಂದು ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.