ADVERTISEMENT

ಪ್ರಕೃತಿ ವಿಕೋಪದ ಎಚ್ಚರ ವಹಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 0:19 IST
Last Updated 1 ಜೂನ್ 2023, 0:19 IST
 ಕೃಷ್ಣ ಬೈರೇಗೌಡ
 ಕೃಷ್ಣ ಬೈರೇಗೌಡ   

ಬೆಂಗಳೂರು: ‘ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅನಾಹುತ ಸಂಭವಿಸಿದರೆ ತಕ್ಷಣ ಪರಿಹಾರ ಕ್ರಮ ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡಿದ್ದೇನೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‌ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹ 538 ಕೋಟಿ ಲಭ್ಯವಿದೆ. ಒಂದೆರಡು ಜಿಲ್ಲೆಯವರು ಹೆಚ್ಚಿನ ಹಣ ಬೇಕೆಂದು ಮನವಿ ಮಾಡಿದ್ದಾರೆ.‌ ಕೊಡಗು, ಮಂಗಳೂರು, ಬೆಳಗಾವಿ, ರಾಯಚೂರು ಭಾಗದಲ್ಲಿ ವಿಪತ್ತು ನಿರ್ವಹಣಾ ತಂಡ ಸಜ್ಜಾಗಿರುವಂತೆ ಈಗಾಗಲೇ ಸೂಚಿಸಲಾಗಿದೆ. ಸಿಡಿಲಿನಿಂದ ಪ್ರಾಣ ಹಾನಿ ಹೆಚ್ಚುತ್ತಿದ್ದು, ಈ ಬಗ್ಗೆಯೂ ಜನರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದರು.

‘ಪ್ರಕೃತಿ ವಿಕೋಪದಿಂದ ಜನವರಿಯಿಂದ ಈವರೆಗೆ 65 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 59 ಮಂದಿಗೆ ಪರಿಹಾರಧನ ನೀಡಲಾಗಿದೆ. 487 ಜಾನುವಾರುಗಳು ಮೃತಪಟ್ಟಿವೆ. ಅದಕ್ಕೂ ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ. 1,400 ಮನೆಗಳಿಗೆ ಹಾನಿಯಾಗಿದೆ. 20,160 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎರಡು ದಿನದಲ್ಲಿ ಪ್ರಾಣಹಾನಿ ಪರಿಹಾರ ವಿತರಿಸಬೇಕು. ಬೆಳೆ ಹಾನಿಗೆ ರೈತರ ಖಾತೆಗೆ ಪರಿಹಾರ ಹಣ ವರ್ಗಾವಣೆ ಮಾಡಬೇಕೆಂದು ಸೂಚಿಸಿದ್ದೇನೆ. ಇನ್ನು ಎರಡು ದಿನಗಳಲ್ಲಿ ಬೆಳೆ ಹಾನಿ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದರು.

ADVERTISEMENT

‘ಬಗರ್ ಹುಕುಂ ಸಾಗುವಳಿದಾರರ ಅರ್ಜಿ ವಿಲೇವಾರಿಗೆ ನೇಮಿಸಿದ್ದ ಸಮಿತಿ ವಜಾಗೊಂಡಿದೆ. ಮುಂದಿನ ಒಂದು ತಿಂಗಳಿನಲ್ಲಿ ಹೊಸ ಸಮಿತಿ ರಚಿಸಲಾಗುವುದು. ಮಲೆನಾಡು, ಕರಾವಳಿ ಭಾಗದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನಿನ ಬಗ್ಗೆ ಸಾಕಷ್ಟು ಗೊಂದಲ ಇದೆ.‌ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಜಂಟಿ ಸಮೀಕ್ಷೆ ಮಾಡಿಸುವ ಪ್ರಯತ್ನ ಮಾಡುತ್ತೇನೆ‘ ಎಂದೂ ಅವರು ಹೇಳಿದರು.

‘ಭೂ ಕಬಳಿಕೆ: ಪರಿಶೀಲಿಸಿ ಕ್ರಮ’

‘ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು ಸುತ್ತಮುತ್ತ ಭೂಮಿ ಕಬಳಿಸಿರುವ ಪ್ರಕರಣಗಳು ಗಮನಕ್ಕೆ ಬಂದಿದೆ. ಯಲಹಂಕ ತಾಲ್ಲೂಕಿನಲ್ಲಿ 6–7 ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಇಂಥ ಪ್ರಕರಣಗಳನ್ನು ಪ್ರಾದೇಶಿಕ ಆಯುಕ್ತರು ಅಥವಾ ನಿವೃತ್ತ ನ್ಯಾಯಾಧೀಶರ ಮೂಲಕ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗು ವುದು. ಖಾಸಗಿಯವರಿಗೆ ಸರ್ಕಾರಿ ಭೂಮಿ ನೀಡಿರುವ ಬಗ್ಗೆಯೂ ಮರು ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳಿಂದ ಸೂಚಿಸಿದ್ದೇವೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಪ್ರವಾಹ, ಭೂಕುಸಿತದ ಅಪಾಯವಿಲ್ಲ’

ಬೆಂಗಳೂರು: ‘ರಾಜ್ಯದಲ್ಲಿ ಈ ಬಾರಿ ಸಾಮಾನ್ಯ ಮುಂಗಾರಿಗಿಂತಲೂ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಭೂಕುಸಿತ ಹಾಗೂ ಪ್ರವಾಹದ ಆತಂಕ ಇರುವುದಿಲ್ಲ’ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿವೃತ್ತ ಉಪ ಮಹಾನಿರ್ದೇಶಕ ಡಾ.ಎಚ್.ಎಸ್.ಎಂ. ಪ್ರಕಾಶ್ ತಿಳಿಸಿದ್ದಾರೆ.

‘ಪ್ರಸಕ್ತ ವರ್ಷದ ಮುಂಗಾರು ಅವಧಿಯ ಭೂಮಾಪನ ವಿಜ್ಞಾನದ ಅಧ್ಯಯನದ ಪ್ರಕಾರ, ಕೊಡಗು  ಹಾಗೂ ಕೇರಳದಲ್ಲಿ 2018, 2019ರಲ್ಲಿ ಉಂಟಾಗಿದ್ದ ಮಳೆ ದುರಂತದ ಯಾವುದೇ ಅಪಾಯದ ಮುನ್ಸೂಚನೆ ಕಂಡುಬರುತ್ತಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಭಾರತದ ಸುತ್ತಮುತ್ತಲ ನೆಲದ ಮೇಲಿನ ಅಥವಾ ಸಮುದ್ರದ ಒಳಗಿನ ಹಲವಾರು ದೊಡ್ಡ ಜ್ವಾಲಾಮುಖಿಗಳು ನಿಷ್ಕ್ರಿಯ ಆಗಿರುವುದರಿಂದ ಆವಿಯ ಮೂಲಗಳು ಸ್ಥಗಿತವಾಗಿವೆ. ದೊಡ್ಡ ಜ್ವಾಲಾಮುಖಿಗಳು 2017, 2018 ಹಾಗೂ 2019ರಲ್ಲಿ ಸಕ್ರಿಯವಾಗಿದ್ದವು. ಹೀಗಾಗಿ, ಎರಡು ವರ್ಷ ಭಾರಿ ಮಳೆಯಾಗಿತ್ತು. ಇವುಗಳು ಈಗ ಸಕ್ರಿಯವಾಗುವ ಮುನ್ಸೂಚನೆಗಳೂ ಕಂಡು ಬರುತ್ತಿಲ್ಲ’ ಎಂದು ತಿಳಿಸಿದ್ದಾರೆ.

‘ಉತ್ತರ ಕರ್ನಾಟಕ, ಮಧ್ಯ ಭಾರತ ಹಾಗೂ ಉತ್ತರ ಭಾರತದಲ್ಲಿಯೂ ಕಳೆದ ವರ್ಷಗಳ ಹಾಗೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಜುಲೈ ಹಾಗೂ ಆಗಸ್ಟ್‌ನಲ್ಲಿ ಒಂದೆರಡು ಬಾರಿ ಹೆಚ್ಚಿನ ಮಳೆಯಾದರೂ ಆತಂಕದ ವಾತಾವರಣವಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.