ಚಿತ್ರದುರ್ಗ: ಸೋಂದಾ ಸ್ವರ್ಣವಲ್ಲಿ ಮಠ ಆಯೋಜಿಸಿದ್ದ ‘ಭಗವದ್ಗೀತಾ ಅಭಿಯಾನ’ದ ಮಹಾಸಮರ್ಪಣಾ ಸಮಾರಂಭದಲ್ಲಿ ಸುಮಾರು ಐದು ಸಾವಿರ ಶಾಲಾ ಮಕ್ಕಳು ಭಗವದ್ಗೀತೆಯ 16ನೇ ಅಧ್ಯಾಯವನ್ನು ಏಕಕಂಠದಲ್ಲಿ ಪಠಿಸಿದರು.
ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಭಕ್ತರು ಮಕ್ಕಳೊಂದಿಗೆ ಧ್ವನಿಗೂಡಿಸಿದರು. ಕಂಠಪಾಠ ಮಾಡಿದ್ದ 24 ಶ್ಲೋಕಗಳನ್ನು ಕೆಲವರು ಕೃತಿ ನೋಡದೇ ಸುಶ್ರಾವ್ಯವಾಗಿ ಉಚ್ಚರಿಸಿದರು.
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೂಚನೆಯ ಮೇರೆಗೆ ಬಹುತೇಕರು ಕಾಲಲ್ಲಿದ್ದ ಚಪ್ಪಲಿ ಹಾಗೂ ಶೂಗಳನ್ನು ಕಳಚಿಟ್ಟರು. ಶ್ರೀಕೃಷ್ಣನನ್ನು ಧ್ಯಾನಿಸುತ್ತಲೇ ಗೀತೆಯ ಪಾರಾಯಣ ನಡೆಯಿತು. ಹಿನ್ನೆಲೆ ಸಂಗೀತ ಪಾರಾಯಣಕ್ಕೆ ಸಾಥ್ ನೀಡಿತ್ತು.
‘ನಾಲ್ಕು ತಿಂಗಳ ಹಿಂದೆ ಮಳೆ ಕೊರತೆ ಎದುರಿಸುತ್ತಿದ್ದ ಚಿತ್ರದುರ್ಗ ಜಿಲ್ಲೆ ತಂಪಾಗಿದೆ. ವರುಣ ಧರೆಗೆ ಇಳಿದಿದ್ದಾನೆ. ಜಗತ್ತಿನ ತಾಪಮಾನ ಏರುತ್ತಿದ್ದರೂ ಕೋಟೆ ನಾಡಿನ ತಾಪಮಾನ ಇಳಿಕೆ ಆಗಿದೆ. ಸಮೃದ್ಧ ಮಳೆಯಾಗಿದೆ. ಗೀತೆಗೆ ಅಂತಹ ಶಕ್ತಿ ಇದೆ’ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
‘ನೈತಿಕತೆಯ ಅಧಃಪತನದಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರ, ಆತ್ಮಹತ್ಯೆ ಪ್ರಕರಣ ಏರುತ್ತಿರುವುದು ಮನಸ್ಸು ಹದಗೆಟ್ಟ ಸೂಚನೆ. ಶಿಕ್ಷಣದ ಜತೆಗೆ ಅಧ್ಯಾತ್ಮದ ಸಂಸ್ಕಾರ ಪ್ರತಿಯೊಬ್ಬರಿಗೂ ಸಿಗಬೇಕು. ಪ್ರತಿದಿನ ಗೀತೆ ಓದುವ ಅಭ್ಯಾಸ ರೂಢಿಸಿಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆಡಳಿತಾತ್ಮಕ ವಿಚಾರಕ್ಕೆ ರಾಷ್ಟ್ರದಲ್ಲಿ ಸಂವಿಧಾನವಿದ್ದರೆ, ಬದುಕಿಗೆ ಭಗವದ್ಗೀತೆಯೇ ಸಂವಿಧಾನ’ ಎಂದರು. ಸದ್ಗುರು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಇದ್ದರು.
***
ರಣರಂಗದಲ್ಲಿ ಕೂಡ ಧರ್ಮ, ನೈತಿಕ ಮೌಲ್ಯಗಳಿದ್ದವು. ಇಂದು ಇವನ್ನು ನಿರೀಕ್ಷಿಸಲು ಸಾಧ್ಯವಿಲ್ಲದಷ್ಟು ಕಾಲ ಬದಲಾಗಿದೆ. ಧಾರ್ಮಿಕ ಕ್ಷೇತ್ರವೇ ರಣಾಂಗಣವಾಗಿದೆ.
–ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಮಠ, ಸಿರಿಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.