ADVERTISEMENT

ರಾಜ್ಯ ತಲುಪಿದ ‘ಕೋವ್ಯಾಕ್ಸಿನ್’ ಲಸಿಕೆ

ಹೈದರಾಬಾದ್‌ನಿಂದ 20 ಸಾವಿರ ಡೋಸ್ ಲಸಿಕೆ ರವಾನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:53 IST
Last Updated 14 ಜನವರಿ 2021, 19:53 IST
   

ಬೆಂಗಳೂರು: ಇದೇ 16ರಿಂದ ಕೋವಿಡ್ ಲಸಿಕೆ ವಿತರಣೆ ಆರಂಭವಾಗಲಿದ್ದು, ರಾಜ್ಯಕ್ಕೆ ಮೊದಲ ಹಂತದಲ್ಲಿ 20 ಸಾವಿರ ಡೋಸ್ ‘ಕೋವ್ಯಾಕ್ಸಿನ್‌’ ಲಸಿಕೆ ಹೈದರಾಬಾದ್‌ನಿಂದ ಗುರುವಾರ ಬಂದಿದೆ.

ಈಗಾಗಲೇ ಕೇಂದ್ರ ಸರ್ಕಾರವು ‘ಕೋವಿಶೀಲ್ಡ್‌’ ಲಸಿಕೆಯನ್ನು ಪುಣೆಯಿಂದ ಬೆಂಗಳೂರಿಗೆ 6.48 ಲಕ್ಷ ಡೋಸ್‌ ಹಾಗೂ ಬೆಳಗಾವಿಗೆ 1.47 ಲಕ್ಷ ಡೋಸ್ ಕಳುಹಿಸಿದೆ. ಈ ಲಸಿಕೆಯನ್ನು ಪ್ರಾದೇಶಿಕ ದಾಸ್ತಾನು ಕೇಂದ್ರಗಳಿಗೆ ಸಾಗಿಸಿ, ಅಲ್ಲಿಂದ ಜಿಲ್ಲಾ ದಾಸ್ತಾನು ಕೇಂದ್ರಗಳಿಗೆ ರವಾನಿಸಲಾಗಿದೆ. ದೇಶದಲ್ಲಿ ‘ಕೋವಿಶೀಲ್ಡ್‌’ ಮತ್ತು ‘ಕೋವ್ಯಾಕ್ಸಿನ್’ ಲಸಿಕೆ ವಿರಣೆಗೆ ಅನುಮತಿ ದೊರೆತಿದೆ.

ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿಯು ‘ಕೋವ್ಯಾಕ್ಸಿನ್‌’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ಸೂಚನೆ ಅನುಸಾರ ಕಂಪನಿಯು ಸ್ಪೈಸ್‌ ಜೆಟ್‌ ವಿಮಾನದಲ್ಲಿ ಲಸಿಕೆಯ ಒಂದು ಸಾವಿರ ಬಾಟಲಿಗಳನ್ನು ಕಳುಹಿಸಿದೆ. ಪ್ರತಿ ಬಾಟಲಿಯಲ್ಲಿ 20 ಡೋಸ್‌ ಲಸಿಕೆ ಇದೆ. ಮೂರು ಬಾಕ್ಸ್‌ಗಳಲ್ಲಿ ಲಸಿಕೆಯ ಬಾಟಲಿಗಳನ್ನು ಪ್ಯಾಕಿಂಗ್ ಮಾಡಿ ತರಲಾಗಿದೆ. ಈ ಬಾಕ್ಸ್‌ಗಳು ಒಟ್ಟು 90 ಕೆ.ಜಿ ತೂಕವಿದ್ದು, ಅವನ್ನು ಆನಂದರಾವ್ ವೃತ್ತದಲ್ಲಿರುವ ರಾಜ್ಯಮಟ್ಟದ ದಾಸ್ತಾನು ಕೇಂದ್ರದಲ್ಲಿ ಇಡಲಾಗಿದೆ.

ADVERTISEMENT

ಈ ಲಸಿಕೆಗಳು ಕಳೆದ ಡಿಸೆಂಬರ್‌ನಲ್ಲಿ ಸಿದ್ಧಗೊಂಡಿದ್ದು, ಮುಂಬರುವ ಮೇ ತಿಂಗಳವರೆಗೆ ಬಳಕೆಗೆ ಯೋಗ್ಯವಾಗಿದೆ. ಲಸಿಕೆಗಳ ಬಾಕ್ಸ್‌ ಹಾಗೂ ಬಾಟಲಿಗಳ ಮೇಲೆ ಇದು ಮಾರಾಟಕ್ಕಲ್ಲ ಎಂದು ನಮೂದಿಸಲಾಗಿದೆ. ರಾಜ್ಯಕ್ಕೆ ಒಟ್ಟು 40 ಸಾವಿರ ಡೋಸ್‌ ‘ಕೋವ್ಯಾಕ್ಸಿನ್‌’ ಲಸಿಕೆ ಹಂಚಿಕೆಯಾಗಬೇಕಿದೆ. ಅದರಲ್ಲಿ ಈಗ ಅರ್ಧದಷ್ಟು ತಲುಪಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರತಿ ಕೇಂದ್ರದಲ್ಲಿ 100 ಮಂದಿಗೆ ಲಸಿಕೆ: ರಾಜ್ಯಕ್ಕೆ ಬಂದಿರುವ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಿಬ್ಬಂದಿಗೆ 15,730 ಡೋಸ್, ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕರ್ತರಿಗೆ 7,75,400 ಡೋಸ್ ಹಾಗೂ ಸೇನಾ ವೈದ್ಯಕೀಯ ಸಿಬ್ಬಂದಿಗೆ 2,580 ಡೋಸ್ ಎಂದು ವಿಂಗಡಣೆ ಮಾಡಲಾಗಿದೆ. ಇದರಲ್ಲಿ ಸದ್ಯ ಲಭ್ಯವಿರುವ ಲಸಿಕೆಯನ್ನು ಆಧರಿಸಿ 3,57,169 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಪ್ರತಿ ವ್ಯಕ್ತಿಗೆ ಈಗ 0.5 ಎಂಎಲ್‌ನ ಒಂದು ಡೋಸ್ ನೀಡಲಾಗುತ್ತದೆ. 28 ದಿನಗಳ ಬಳಿಕ ಎರಡನೇ ಡೋಸ್‌ ನೀಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಲಸಿಕೆ ವಿತರಣೆ ನಡೆಸಲು ಯೋಜನೆ ರೂಪಿಸಲಾಗಿದೆ. ಲಸಿಕೆ ಕೇಂದ್ರಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.