ADVERTISEMENT

ಯಾತ್ರೆಗೆ ಅಡ್ಡಿಪಡಿಸಿದರೆ ಬಿಜೆಪಿಯವರನ್ನು ಓಡಾಡಲು ಬಿಡಲ್ಲ: ಸಿದ್ದರಾಮಯ್ಯ

ಪಿಟಿಐ
Published 30 ಸೆಪ್ಟೆಂಬರ್ 2022, 10:02 IST
Last Updated 30 ಸೆಪ್ಟೆಂಬರ್ 2022, 10:02 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಗುಂಡ್ಲುಪೇಟೆ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ 'ಭಾರತ್‌ ಜೋಡೊ ಯಾತ್ರೆ' ಇಂದು (ಸೆ.30, ಶುಕ್ರವಾರ) ಕರ್ನಾಟಕ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾತ್ರೆಗೆ ಅಡ್ಡಿಪಡಿಸಲು ಯತ್ನಿಸಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಯಾತ್ರೆಯು ತಮಿಳುನಾಡು ಹಾಗೂ ಕೇರಳ ಸಂಚಾರ ಮುಗಿಸಿ ಕೇರಳದ ಸುಲ್ತಾನ್‌ ಬತ್ತೇರಿ ಮಾರ್ಗವಾಗಿ ರಾಜ್ಯ ಪ್ರವೇಶಿಸಿದೆ. ಗುಂಡ್ಲುಪೇಟೆಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ, ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು ಯಾತ್ರೆಯ ಉದ್ದೇಶ ಎಂದು ಹೇಳಿದ್ದಾರೆ.

'ದೇಶದಲ್ಲಿ ಅಶಾಂತಿ ನೆಲೆಗೊಂಡಿದೆ. ಸಾಕಷ್ಟು ಸಮಸ್ಯೆಗಳು ಉಲ್ಬಣಿಸಿವೆ. ಭ್ರಷ್ಟಾಚಾರ ಮಿತಿಮೀರಿದೆ. ಕರ್ನಾಟದಲ್ಲಿ 40 ಪರ್ಸೆಂಟ್‌ ಕಮಿಷನ್‌ ಸರ್ಕಾರವಿದೆ' ಎಂದು ಕಿಡಿಕಾರಿದ್ದಾರೆ.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಜನರು ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಹಾಗೆಯೇ, 'ರಾಜ್ಯದಲ್ಲಿ ಈ ಸಮಾವೇಶ ನಡೆಯುತ್ತಿರುವುದನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ' ಎಂದು ತಿವಿದಿದ್ದಾರೆ.

'ನಮಗೆ ಅಡ್ಡಿಪಡಿಸದಂತೆ ನಿಮಗೆ (ಬಿಜೆಪಿಯವರಿಗೆ) ಎಚ್ಚರಿಕೆ ನೀಡುತ್ತಿದ್ದೇನೆ. ಇಲ್ಲವಾದರೆ, ನಿಮ್ಮನ್ನು ರಾಜ್ಯದಲ್ಲಿ ಓಡಾಡಲು ಬಿಡುವುದಿಲ್ಲ' ಎಂದು ಎಚ್ಚರಿಸಿದ್ದಾರೆ. ಇದೇವೇಳೆ ಅವರು ರಾಜ್ಯ ಪೊಲೀಸರು ಬಿಜೆಪಿ ಜೊತೆ ಕೈಜೋಡಿಸದಂತೆ ತಿಳಿಸಿದ್ದಾರೆ.

'ಆರು ತಿಂಗಳ ನಂತರ ನಾವು ಅಧಿಕಾರಕ್ಕೆ ಬರುತ್ತೇವೆ. ಬದಲಾವಣೆ ಆಗಲಿದೆ. ಎಲ್ಲ ಪೊಲೀಸರೂ ಒಂದೇರೀತಿ ಇರುವುದಿಲ್ಲ. ಆದರೆ, ಬಿಜೆಪಿ ಜೊತೆಗೆ ಕೈ ಜೋಡಿಸಿದವರೆಗೆ ತಕ್ಕ ಪಾಠ ಕಲಿಸುತ್ತೇವೆ' ಎಂದು ಕಟುವಾಗಿ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ಬಳಿಕ ದೇಶದಲ್ಲಿ ಉದ್ದೇಶಪೂರ್ವಕವಾಗಿ ಕೋಮುವಾದ, ತಾರತಮ್ಯ ಮತ್ತು ದ್ವೇಷ ರಾಜಕೀಯ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

'ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು ಮತ್ತು ರೈತರ ನಡುವೆ ಆತಂಕದ ವಾತಾವರಣವಿದೆ' ಎಂದಿರುವ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ಬಿಜೆಪಿಗೆ ನಂಬಿಕೆಯೇ ಇಲ್ಲ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.