ADVERTISEMENT

₹41 ಸಾವಿರ ಬೆಲೆ ಬಾಳುವ ಶರ್ಟ್‌, ಐಷಾರಾಮಿ ಬಸ್‌ನಲ್ಲಿ ರಾಹುಲ್ ಯಾತ್ರೆ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2022, 14:30 IST
Last Updated 9 ಸೆಪ್ಟೆಂಬರ್ 2022, 14:30 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಧರಿಸಿರುವ ಬ್ಲೂಬೆರ‍್ರಿ ಟಿ–ಶರ್ಟ್‌
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಧರಿಸಿರುವ ಬ್ಲೂಬೆರ‍್ರಿ ಟಿ–ಶರ್ಟ್‌   

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ದುಬಾರಿ ಬೆಲೆಯ ಶರ್ಟ್‌ ಧರಿಸಿ, ಐಷಾರಾಮಿ ಬಸ್‌ನಲ್ಲಿ ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

'ಭಾರತ್‌ ಜೋಡೊ ಯಾತ್ರೆ’ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶದಲ್ಲಿನ ಬೆಲೆ ಏರಿಕೆ ಜನರ ಜೀವನ ತತ್ತರಿಸುವಂತೆ ಮಾಡುತ್ತಿದೆ. ಎಂದೆಲ್ಲಾ ಬೊಂಬಡಾ ಬಾರಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ₹41,257 ಬೆಲೆಯ ಶರ್ಟ್‌ ಧರಿಸಿ, ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಬಸ್‌ನಲ್ಲಿ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ’ ಎಂದು ವಾಗ್ದಾಳಿ ನಡೆಸಿದೆ.
‘ನಾನು ಯಾತ್ರೆಯನ್ನು ಮುನ್ನಡೆಸುತ್ತಿಲ್ಲ. ಪಾಲ್ಗೊಳ್ಳುತ್ತಿದ್ದೇನೆ’ ಎಂದು ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಗುರುವಾರ ಹೇಳಿದ್ದರು.

ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಭಾರತ್‌ ಜೋಡೊ ಯಾತ್ರೆ’ಗೆ ಬುಧವಾರ ರಾಹುಲ್ ಗಾಂಧಿ ಚಾಲನೆ ನೀಡಿದರು.

ADVERTISEMENT

3,570 ಕಿ.ಮೀ. ಸಂಚರಿಸಲಿರುವ ‘ಭಾರತ್‌ ಜೋಡೊ’ ಯಾತ್ರೆಯು ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ, ರಾಜಕೀಯ ಕೇಂದ್ರೀಕರಣ ಸೇರಿದಂತೆ ದೇಶವನ್ನು ಬಾಧಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಪಕ್ಷ ಹೇಳಿದೆ.

ಕಾಂಗ್ರೆಸ್‌ ತಿರುಗೇಟು: ರಾಹುಲ್‌ ಗಾಂಧಿ ಅವರ ಟಿ–ಶರ್ಟ್‌ ವಿಚಾರವಾಗಿ ಬಿಜೆಪಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, ‘ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುವ ₹10 ಲಕ್ಷದ ಸೂಟು ಹಾಗೂ ₹1.5 ಲಕ್ಷ ಮೌಲ್ಯದ ಕನ್ನಡಕದ ಬಗ್ಗೆಯೂ ಆಡಳಿತಾರೂಢ ಪಕ್ಷ ಮಾತನಾಡಬೇಕು’ ಎಂದಿದೆ.

‘ಭಾರತವನ್ನು ಒಗ್ಗೂಡಿಸಿ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ಜನರನ್ನು ನೋಡಿ ಹೆದರಿದ್ದೀರಾ?. ಸಮಸ್ಯೆಗಳ ಬಗ್ಗೆ ಮಾತನಾಡಿ... ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ’ ಎಂದೂ ಕಾಂಗ್ರೆಸ್‌ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.