ADVERTISEMENT

ಅಡ್ವಾಣಿ, ನರಸಿಂಹರಾವ್‌ಗೆ ಭಾರತ ರತ್ನ: ವಕೀಲ ರವಿವರ್ಮ ಕುಮಾರ್ ಆಕ್ಷೇಪ

‘ಕೇಶವಾನಂದ ಭಾರತೀ ಪ್ರಕರಣದಿಂದ ಸಮಾನತೆ ನಾಶ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 10:24 IST
Last Updated 10 ಫೆಬ್ರುವರಿ 2024, 10:24 IST
   

ಬೆಂಗಳೂರು: ‘ಬಾಬರಿ ಮಸೀದಿ ಧ್ವಂಸಗೊಳಿಸುವ ಚಳವಳಿಯ ರೂವಾರಿಯಾಗಿದ್ದ ಲಾಲ್‌ ಕೃಷ್ಣ ಅಡ್ವಾಣಿ, ಈ ಧ್ವಂಸ ಕಾರ್ಯ ನಡೆಯುವಾಗ ಅಧಿಕಾರದಲ್ಲಿದ್ದ ಮತ್ತು ಅದನ್ನು ಮೌನವಾಗಿ ವೀಕ್ಷಿಸಿದ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್‌ ಅಂಥವರಿಗೆ 'ಭಾರತ ರತ್ನ' ಪ್ರಶಸ್ತಿ ಘೋಷಿಸಿರುವ ಇಂದಿನ ದಿನಗಳಲ್ಲಿ ಜಾತ್ಯತೀತ ಶಬ್ದಕ್ಕೆ ಅರ್ಥ ಎಲ್ಲಿ ಉಳಿದಿದೆ’ ಎಂದು ಹಿರಿಯ ವಕೀಲ ರವಿವರ್ಮ ಕುಮಾರ್‌ ಪ್ರಶ್ನಿಸಿದರು.

ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮಹತ್ವವಾದ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪ್ರಕಟಗೊಂಡ 50ನೇ ವರ್ಷದ ಅವಲೋಕನದ ಅಂಗವಾಗಿ, ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ದೇಶದ ಉದ್ದಗಲಕ್ಕೂ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುತ್ತಿರುವಾಗ ಮತ್ತು ಸ್ವತಃ ಸುಪ್ರೀಂ ಕೋರ್ಟ್‌, ಮಸೀದಿ ಧ್ವಂಸಗೊಂಡ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ತೀರ್ಪು ನೀಡಿರುವಾಗ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಅಥವಾ ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಬಣ್ಣಿಸಿದ ಅವರು, ‘ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಆರು ಜನ ಬಲಿಯಾಗುವುದು, ದ್ವೇಷ ಭಾಷಣಗಳು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿರುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಯ (ಯುಸಿಸಿ) ಮಾತುಗಳು ಈ ದಿನಗಳಲ್ಲಿ ಕೇಳಿಬರುತ್ತಿರುವುದು ಸಂವಿಧಾನದ ಮೂಲತತ್ವಗಳು ಮರೆಯಾಗಿರುವುದಕ್ಕೆ ಸಾಕ್ಷಿ’ ಎಂದರು.

ADVERTISEMENT

ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಶಂಕರಾಚಾರ್ಯ ಪರಂಪರೆಯ ಕಾಸರಗೋಡು ಜಿಲ್ಲೆ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ‘ಅಂದಿನ ಕೇರಳ ಭೂ ಸುಧಾರಣಾ ಕಾನೂನು ಜಾರಿಯಿಂದಾಗಿ ಮಠ 400 ಎಕರೆಗೂ ಹೆಚ್ಚಿನ ಜಮೀನನ್ನು ಕಳೆದುಕೊಳ್ಳುವಂತಾಯಿತು. ಆದರೆ, ಇದರಿಂದಾಗಿ ಉಂಟಾದ ಕಾನೂನು ಸಮರದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಯುವಂತಾಯಿತು’ ಎಂದರು.

ಆದರೆ, ಈ ಮಾತುಗಳನ್ನು ಬಲವಾಗಿ ವಿರೋಧಿಸಿದ ರವಿವರ್ಮ ಕುಮಾರ್, ‘ಆಸ್ತಿಯ ಹಕ್ಕಿನಲ್ಲೇ ಮೂಲಭೂತ ಹಕ್ಕುಗಳು ಅಡಗಿವೆ. ಆವತ್ತು ಇಂದಿರಾಗಾಂಧಿ ಕೈಗೊಂಡಿದ್ದ ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಸುಧಾರಣೆಯಂತಹ ಕ್ರಮಗಳು ಕೇಶವಾನಂದ ಭಾರತೀ ಪ್ರಕರಣದ ತೀರ್ಪಿನಿಂದಾಗಿ, ಮಹಿಳೆ–ಪುರುಷ, ಶ್ರೀಮಂತ–ಬಡವ, ಬ್ರಾಹ್ಮಣ–ಭಂಗಿ, ಮಾಧ್ವ–ಮಾದಿಗ ಎಂಬ ಅಸಮಾನತೆಯನ್ನು ಮತ್ತೆ ಮುಂದುವರಿಸುವಂತಾಯಿತು. ಈ ದೇಶದ ಆರ್ಥಿಕತೆ ನಾಶವಾಯಿತು’ ಎಂದು ವಿಶ್ಲೇಷಿಸಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಮಾತನಾಡಿ, ‘ಕಳೆದ 10 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳಲ್ಲಿ ಶೇ 24ರಷ್ಟು ಕೂಗಾಟ, ಅರಚಾಟ, ಬಡಿದಾಟ, ಧರಣಿ ಮತ್ತು ಕಲಾಪ ಬಹಿಷ್ಕಾರದಂತಹ ಘಟನೆಗಳೇ ಜರುಗಿವೆ. ಶೇ 47ರಷ್ಟು ಮಸೂದೆಗಳು ಚರ್ಚೆಯಾಗದೇ ಅಂಗೀಕಾರಗೊಂಡಿವೆ. ಇಂತಹ ಸಮಯದಲ್ಲಿ ಸಂವಿಧಾನ ತಿದ್ದುಪಡಿಯ ಮಾತುಗಳು ಕೇಳಿಬರುತ್ತಿದ್ದು, ಇದರ ಅಗತ್ಯವೇನೆಂಬುದನ್ನು ಪ್ರಶ್ನಿಸಬೇಕಾಗಿದೆ’ ಎಂದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಕೇಶವಾನಂದ ಭಾರತೀ ಪ್ರಕರಣದ ತೀರ್ಪು ನೀಡುವಾಗ 13 ನ್ಯಾಯಮೂರ್ತಿಗಳ ಪೀಠದಲ್ಲಿ ತಮ್ಮ ತಂದೆ ಕೆ.ಎಸ್.ಹೆಗ್ಡೆ ಅವರೂ ಇದ್ದುದನ್ನು ಸ್ಮರಿಸಿದರು.

ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಚ್‌.ಎಲ್‌.ವಿಶಾಲ ರಘು, ಕಾರ್ಯಕ್ರಮ ಆಯೋಜಿಸಿದ್ದ ‘ಯೂನಿವರ್ಸಲ್ ಸ್ಕೂಲ್ ಆಫ್ ಲಾ’ ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ, ಸಂಸ್ಥೆಯ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಆಡಳಿತಾಧಿಕಾರಿ ಸಂತೋಷ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.