ADVERTISEMENT

ಸಿದ್ಧಗಂಗಾ ಶ್ರೀಗೆ ಭಾರತ ರತ್ನ ಕೊಡಿ: ಸಿದ್ದರಾಮಯ್ಯ

ಹಿಂದುತ್ವ ಪದ ಬಳಸಿದ್ದೇ ಸಾವರ್ಕರ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 19:45 IST
Last Updated 19 ಅಕ್ಟೋಬರ್ 2019, 19:45 IST
ಮೈಸೂರಿಗೆ ಶನಿವಾರ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮಗೆ ಸ್ವಾಗತ ಕೋರಲು ನೆರೆದಿದ್ದ ಕಾರ್ಯಕರ್ತರತ್ತ ಕೈಬೀಸಿದರು    –ಪ್ರಜಾವಾಣಿ ಚಿತ್ರ
ಮೈಸೂರಿಗೆ ಶನಿವಾರ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮಗೆ ಸ್ವಾಗತ ಕೋರಲು ನೆರೆದಿದ್ದ ಕಾರ್ಯಕರ್ತರತ್ತ ಕೈಬೀಸಿದರು    –ಪ್ರಜಾವಾಣಿ ಚಿತ್ರ   

ಮೈಸೂರು: ವೀರ್‌ ಸಾವರ್ಕರ್‌ ಅವರಿಗೆ ‘ಭಾರತ ರತ್ನ’ ನೀಡುವ ಬಿಜೆಪಿಯ ಪ್ರಸ್ತಾವ ವನ್ನು ಶನಿವಾರ ಮತ್ತೆ ಟೀಕಿ ಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಚುನಾವಣೆ ಬಂದಾಗಲೆಲ್ಲ ಈ ಪಕ್ಷವು ಅಭಿವೃದ್ಧಿ ವಿಷಯಗಳನ್ನು ಮರೆಮಾಚಿ, ಜನರ ಭಾವನೆಗಳನ್ನು ಪ್ರಚೋದಿಸುವ ಹಾಗೂ ಹಿಂದುತ್ವದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಹಿಂದಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದೆ’ ಎಂದು ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಎಂದು ಬೇಡಿಕೊಂಡರೂ ಕೊಡಲಿಲ್ಲ. ಆದರೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಾವರ್ಕರ್‌ಗೆ ಈ ಗೌರವ ನೀಡಲು ಮುಂದಾಗಿದೆ’ ಎಂದು ಕಿಡಿಕಾರಿದರು.

ADVERTISEMENT

‘ಹಿಂದುತ್ವ ಪದವನ್ನು ಮೊದಲು ಬಳಸಿದ್ದೇ ಸಾವರ್ಕರ್‌. ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ಅವರು ಜೈಲಿಗೆ ಹೋಗಿದ್ದೂ ನಿಜ’ ಎಂದರು.

‘ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯವಿಲ್ಲವೆಂದು ಅವರು ಖುಲಾಸೆ ಗೊಂಡಿರಬಹುದು. ಅಂಥವರಿಗೆ ಭಾರತ ರತ್ನ ಕೊಡಬಾರದು ಎಂದಷ್ಟೇ ಹೇಳಿದ್ದೆ. ಅದಕ್ಕಾಗಿ, ನನಗೆ ಇತಿಹಾಸವೇ ಗೊತ್ತಿಲ್ಲ ಎಂದು ಬಿಜೆಪಿಯವರು ಮಾತನಾಡುತ್ತಾರೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕಟೀಲ್‌ಗೆ ಕರ್ನಾಟಕವೇ ಗೊತ್ತಿಲ್ಲ. ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ಬಾಲಿಶ ಹೇಳಿಕೆ ಕೊಡುತ್ತಾರೆ. ಇಂಥವರು ಇತಿಹಾಸದ ಪಾಠ ಹೇಳಲು ಬರುತ್ತಾರೆ’ ಎಂದು ತಿರುಗೇಟು ನೀಡಿದರು.

‘ಸಿದ್ದರಾಮಯ್ಯನೇ ದೇಶದ್ರೋಹಿ’

ತುಮಕೂರು: ವೀರ್‌ ಸಾವರ್ಕರ್‌ ಅವರಿಗೆ ಭಾರತ ರತ್ನ ಕೊಡುವ ವಿಚಾರವನ್ನು ವಿರೋಧಿಸುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನೇ ದೇಶದ್ರೋಹಿ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಕ್ಕಾಗಿ ಪ್ರಾಣ ಕೊಟ್ಟವರ ಬಗ್ಗೆ ಸಿದ್ದರಾಮಯ್ಯನಿಗೆ ತಿಳಿದೇ ಇಲ್ಲ. ಅಂತಹವರಿಗೆ ಗೌರವ ಕೊಡುವುದೂ ಆತನಿಗೆ ಗೊತ್ತಿಲ್ಲ. ಜಾತಿಗಳನ್ನು ವಿಭಜಿಸುವುದೇ ಸಿದ್ದರಾಮಯ್ಯನ ಕೆಲಸ. ಆತ ಒಬ್ಬ ಉಗ್ರಗಾಮಿ’ ಎಂದು ಕಟುವಾಗಿ ಟೀಕಿಸಿದರು.

***

ಬ್ರಿಟಿಷರ ಕ್ಷಮೆ ಕೇಳಿ, ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಶರಣಾಗುವುದಾಗಿ ಬರೆದುಕೊಟ್ಟಿದ್ದ ಸಾವರ್ಕರ್‌ ಅಂಥವರಿಗೆ ‘ಭಾರತ ರತ್ನ’ ಕೊಡಬೇಕಾ?
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.