ADVERTISEMENT

ಪದ್ಮನಾಭ, ರಾಜಗೋಪಾಲ್, ರಮಾಮಣಿಗೆ ‘ಭಾರತಿ ತ್ಯಾಗರಾಜ ಸಮ್ಮಾನ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 19:45 IST
Last Updated 4 ಜನವರಿ 2023, 19:45 IST
ಆರ್.ಕೆ. ಪದ್ಮನಾಭ
ಆರ್.ಕೆ. ಪದ್ಮನಾಭ   

ಬೆಂಗಳೂರು: ಸದ್ಗುರು ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಂಕರ್ಯ ಟ್ರಸ್ಟ್‌ ನೀಡುವ ‘ಭಾರತಿ ತ್ಯಾಗರಾಜ ಸಮ್ಮಾನ್’ ಪ್ರಶಸ್ತಿಗೆ ಕರ್ನಾಟಕ ಸಂಗೀತದ ಸಾಧಕ ಆರ್.ಕೆ. ಪದ್ಮನಾಭ, ಮೃದಂಗ ವಿದ್ವಾನ್ ವಿ.ಎಸ್. ರಾಜಗೋಪಾಲ್ ಹಾಗೂ ಗಾಯಕಿ ಆರ್.ಎ. ರಮಾಮಣಿ ಅವರು ಆಯ್ಕೆಯಾಗಿದ್ದಾರೆ.

ಜ.6ರಿಂದ 12ರ ವರೆಗೆ ‘176ನೇ ವರ್ಷದ ತ್ಯಾಗರಾಜರ ಆರಾಧನೆ ಮತ್ತು ರಾಷ್ಟ್ರೀಯ ಸಂಗೀತೋತ್ಸವ’ ಕಾರ್ಯಕ್ರಮವನ್ನು ಚಾಮರಾಜಪೇಟೆಯ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಲಾಗಿದೆ. ಇದೇ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಮತ್ತು ಚಿನ್ನದ ಪದಕ ಒಳಗೊಂಡಿದೆ.

ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತ್ಯಾಗರಾಜರ ಆರಾಧನೆ ಮತ್ತು ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯಗಳ 300ಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ. ಉಮಯಲಪುರಂ ಶಿವರಾಮನ್, ಜಯಂತಿ ಕುಮರೇಶ್ ಮತ್ತು ಕುಮಾರೇಶ್, ವಿಜಯ್‌ ಪ್ರಕಾಶ್, ಅಮಿತ್‌ ನಾಡಿಗ್, ನಾಗವಲ್ಲಿ ನಾಗರಾಜ್, ರಘುನಂದನ್, ಸುಚೇನ್‌ ಮುಂತಾದ ಸಂಗೀತಗಾರರು ಕಛೇರಿ ನಡೆಸಿಕೊಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.