ADVERTISEMENT

ಭಾಸ್ಕರ ಶೆಟ್ಟಿ ಕೊಲೆ: ಎಸ್‌ಪಿಪಿ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 20:33 IST
Last Updated 4 ಜುಲೈ 2018, 20:33 IST

ಬೆಂಗಳೂರು: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ವಕೀಲ ಶಾಂತರಾಮ ಶೆಟ್ಟಿ ಅವರನ್ನು ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.

ಏನಿದು ಪ್ರಕರಣ?: ಉದ್ಯಮಿ ಭಾಸ್ಕರ ಶೆಟ್ಟಿ 2016ರ ಜುಲೈ 28ರಂದು ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಎಂಟು ದಿನಗಳ ಬಳಿಕ ಮಣಿಪಾಲ ಪೊಲೀಸರು ಅವರ ಪತ್ನಿ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ADVERTISEMENT

ವಿಚಾರಣೆ ಸಂದರ್ಭದಲ್ಲಿ ಭಾಸ್ಕರ ಶೆಟ್ಟಿ ಕೊಲೆ ವಿಚಾರ ಬಹಿರಂಗಗೊಂಡಿತ್ತು. ರಾಜೇಶ್ವರಿ ಶೆಟ್ಟಿ ಮತ್ತು ಅವರ ಮಗನ ವಿರುದ್ಧ ಕೊಲೆ ಸಂಚು ಆರೋಪ ಹೊರಿಸಲಾಗಿತ್ತು.

ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಕೀಲ ಎಂ.ಶಾಂತರಾಮ್ ಶೆಟ್ಟಿ ಅವರನ್ನು ಎಸ್‌ಪಿಪಿಯಾಗಿ ನೇಮಕ ಮಾಡಿ ರಾಜ್ಯ ಗೃಹ ಇಲಾಖೆ ಆದೇಶಿಸಿತ್ತು. ಇದನ್ನು ರಾಜೇಶ್ವರಿ ಶೆಟ್ಟಿ ಪ್ರಶ್ನಿಸಿದ್ದರು.

‘ನಮ್ಮ ವಿಚಾರದಲ್ಲಿ ಶಾಂತಾರಾಮ್ ಶೆಟ್ಟಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ದೂರುದಾರಾದ ಗುಲಾಬಿ ಶೆಟ್ಟಿ (ಭಾಸ್ಕರ್ ಶೆಟ್ಟಿ ತಾಯಿ) ಅವರ ಮನವಿ ಮೇರೆಗೆ ರಾಜ್ಯ ಗೃಹ ಇಲಾಖೆ ಶಾಂತಾರಾಮ್ ಅವರನ್ನು ಎಸ್‌ಪಿಪಿಯಾಗಿ ನೇಮಕ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗೋಷ್ಠಿ ನಡೆಸಿ ನಮ್ಮ ವಿರುದ್ಧ ಆರೋಪ ಮಾಡಿದ್ದರು. ಹೀಗಾಗಿ, ಅವರು ಪ್ರಕರಣದಲ್ಲಿ ಎಸ್‌ಪಿಪಿಯಾಗಿದ್ದರೆ ನಿಷ್ಪಕ್ಷಪಾತ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಗೃಹ ಇಲಾಖೆ ಆದೇಶ ರದ್ದುಪಡಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.