ಬೆಂಗಳೂರು: ಮಹಾತ್ಮಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ 'ಶತಮಾನ ಸಂಭ್ರಮ’ ಆಚರಿಸಿದ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ, ಬೆಳಗಾವಿಯ ನಿಪ್ಪಾಣಿಗೆ ಬಂದು ಹೋಗಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ನೆನಪಿಗೆ ಏಕೆ ಸಂಭ್ರಮಾಚರಣೆ ಆಯೋಜಿಸಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
‘ಭೀಮ ಹೆಜ್ಜೆ’ ಶತಮಾನ ಸಂಭ್ರಮ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ ಬಂದಿತ್ತು. ಅಂಬೇಡ್ಕರ್ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಲೆಂದೇ ಕಾಂಗ್ರೆಸ್ ಅಂದು ಅಂಬೇಡ್ಕರ್ ಗೆದ್ದಂತಹ ಜೈಸೂರು, ಕುಲ್ಲಾ, ಹರೀದ್ಪುರ ಪ್ರದೇಶಗಳನ್ನು ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು. ಈಗ ದಲಿತರ ವೋಟ್ ಬ್ಯಾಂಕ್‌ಗಾಗಿ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ದೂರಿದರು.
ದಲಿತ ನಾಯಕ ಖರ್ಗೆಗೆ ಅವಮಾನ: ‘ಗುಜರಾತ್‌ನಲ್ಲಿ ಈಚೆಗೆ ನಡೆದ ಎಐಸಿಸಿ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ಕುರ್ಚಿ ಕೊಡದೆ, ಎಲ್ಲೋ ಒಂದು ಬದಿಗೆ ಸೋಫಾ ಮೇಲೆ ಕುಳ್ಳಿರಿಸಿದ್ದರು. ಇದು ಕಾಂಗ್ರೆಸ್‌ನ ದಲಿತ ವಿರೋಧಿ ಮನಸ್ಥಿತಿ’ ಎಂದು ಟೀಕಿಸಿದರು.
ಐದು ದಿನ ‘ಭೀಮ ಹೆಜ್ಜೆ’: 1925ರಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಏ.10, 11ರಂದು ನಡೆದಿದ್ದ ಹಿತಕಾರಿಣಿ ಸಭಾದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಈ ಐತಿಹಾಸಿಕ ದಿನದ ನೆನಪಾಗಿ ಬಿಜೆಪಿ ‘ಭೀಮ ಹೆಜ್ಜೆ’ ಶತಮಾನದ ಸಂಭ್ರಮ ಹಮ್ಮಿಕೊಂಡಿದೆ. 15ರಂದು ನಿಪ್ಪಾಣಿಯಲ್ಲಿ ಸಮಾರೋಪ ನಡೆಯಲಿದೆ. ಬೆಂಗಳೂರಿನಿಂದ ನಿಪ್ಪಾಣಿವರೆಗೆ ಬೈಕ್ ಜಾಥಾ ನಡೆಸಲಾಗುತ್ತಿದೆ ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
ಕಾಂಗ್ರೆಸ್ ದಶಕಗಳಿಂದಲೂ ದಲಿತರನ್ನು ತುಳಿದುಕೊಂಡೇ ಬಂದಿದೆ. ಆದರೆ ಪ್ರತಿ ಬಾರಿಯೂ ತುಳಿತಕ್ಕೆ ಒಳಗಾದವರು ಎಂಬ ಕನಿಕರ ತೋರಿಸುತ್ತದೆಆರ್. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.