ಭೀಮಗಢ ಅರಣ್ಯ
(ಸಾಂದರ್ಭಿಕ ಚಿತ್ರ)
ನವದೆಹಲಿ: ಕರ್ನಾಟಕದ ಭೀಮಗಢ ವನ್ಯಜೀವಿಧಾಮದ ಸುತ್ತಲಿನ 11,938 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದೆ.
ಇದರಲ್ಲಿ 11,413 ಹೆಕ್ಟೇರ್ ಮೀಸಲು ಅರಣ್ಯವಾಗಿದ್ದರೆ, 525 ಹೆಕ್ಟೇರ್ ಕಂದಾಯ ಜಮೀನು. 2023ರ ಆಗಸ್ಟ್ ತಿಂಗಳಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಇದೀಗ ಸಚಿವಾಲಯವು ಅಂತಿಮ ಅಧಿಸೂಚನೆ ಹೊರಡಿಸಿದೆ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ 119 ಚದರ ಕಿ.ಮೀ. ಈ ವನ್ಯಜೀವಿಧಾಮವು ಮಹದಾಯಿ ನದಿಯ ಜಲಾನಯನ ಪ್ರದೇಶದಲ್ಲಿದೆ. ದಾಂಡೇಲಿ ವನ್ಯಜೀವಿಧಾಮ ಹಾಗೂ ಗೋವಾದ ಮಹದಾಯಿ ವನ್ಯಜೀವಿ
ಧಾಮದೊಂದಿಗೆ ಗಡಿ ಹಂಚಿಕೊಂಡಿದೆ. ಈ ವನ್ಯಜೀವಿಧಾಮದ ವಿಸ್ತೀರ್ಣ 19,402 ಹೆಕ್ಟೇರ್. ಪರಿಸರ ಸೂಕ್ಷ್ಮ ಪ್ರದೇಶವು 13 ಗ್ರಾಮಗಳನ್ನು ಒಳಗೊಂಡಿದೆ. ಕೆಲವೊಂದು ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ 3.3 ಕಿ.ಮೀ. ವರೆಗೆ ಇದೆ.
ಪರಿಸರ ಸೂಕ್ಷ್ಮ ಪ್ರದೇಶಕ್ಕಾಗಿ ಕರ್ನಾಟಕ ಸರ್ಕಾರವು ಎರಡು ವರ್ಷಗಳೊಳಗೆ ವಲಯ ಮಹಾಯೋಜನೆ ಸಿದ್ಧಪಡಿಸಿ ಜಾರಿಗೆ ತರಬೇಕು. ಸ್ಥಳೀಯ ಜನರು ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಈ ಕಾರ್ಯ ನಡೆಸಬೇಕು ಎಂದು
ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮೇಲ್ವಿಚಾರಣಾ ಸಮಿತಿ: ಪರಿಸರ ಸೂಕ್ಷ್ಮ ಪ್ರದೇಶದ ಮೇಲ್ವಿಚಾರಣೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವನ್ಯಜೀವಿ ತಜ್ಞರು ಸೇರಿ 16 ಮಂದಿ ಸದಸ್ಯರಾಗಿರುವರು.
‘ಪರಿಸರ ಸೂಕ್ಷ್ಮ ವಲಯವು ಪರಿಸರಕ್ಕೆ ಹಾನಿ ಉಂಟು ಮಾಡುವ ಚಟುವಟಿಕೆಗಳನ್ನು ನಿರ್ಬಂಧಿಸಲು ಮತ್ತು ನಿಯಂತ್ರಿಸಲು ಇರುತ್ತದೆಯೇ ಹೊರತು ಸ್ಥಳೀಯ ಜನರ ದಿನನಿತ್ಯದ ಯಾವುದೇ ಚಟುವಟಿಕೆಗಳಿಗೆ ತೊಂದರೆ ಆಗುವುದಿಲ್ಲ. ಅರಣ್ಯ ಇಲಾಖೆ ಈ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಯಾರೂ ಈ ಕುರಿತು ವದಂತಿಗಳನ್ನು ಹರಡಬಾರದು' ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಮನವಿ ಮಾಡಿದರು.
‘ಇದು ಹಲವು ವರ್ಷಗಳ ಸಂಘಟಿತ ಪ್ರಯತ್ನದ ಫಲವಾಗಿದೆ. ಬೆಳಗಾವಿ ಸಿಸಿಎಫ್ ಮಂಜುನಾಥ್ ಚವ್ಹಾಣ್, ಡಿಸಿಎಫ್‌ಗಳಾದ ಹರ್ಷ ಭಾನು, ಶಂಕರ್ ಕಲ್ಲೋಳಿಕರ್, ಎಸಿಎಫ್ ಸಂತೋಷ್ ಚವ್ಹಾಣ್, ಆರ್‌ಎಫ್‌ಒ ರಾಕೇಶ್ ಅರ್ಜುನವಾಡ್ ಅವರ ಶ್ರಮ ಸಾಕಷ್ಟಿದೆ. ಬಹಳಷ್ಟು ಸುತ್ತಿನ ಚರ್ಚೆಗಳು, ಹಿರಿಯ ಅಧಿಕಾರಿಗಳ ಸಲಹೆಗಳು ಹಾಗೂ ಸೂಚನೆಗಳಿಂದ ಇದು ಸಾಧ್ಯವಾಗಿದೆ’ ಎಂದರು.
ನೀರಾವರಿ ಯೋಜನೆಗೆ ನಿರ್ಬಂಧ
l ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಕಲ್ಲು ಪುಡಿ ಮಾಡುವ ಘಟಕಗಳಿಗೆ ಪೂರ್ಣ ನಿಷೇಧ
l ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ
l ಯಾವುದೇ ಹೊಸ ಉಷ್ಣ ವಿದ್ಯುತ್, ಪರಮಾಣು ವಿದ್ಯುತ್ ಹಾಗೂ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ
l ಯಾವುದೇ ಅಪಾಯಕಾರಿ ವಸ್ತುಗಳ ಬಳಕೆ ಅಥವಾ ಉತ್ಪಾದನೆ ಅಥವಾ ಸಂಸ್ಕರಣೆಗೆ ನಿರ್ಬಂಧ
l ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯಕ್ಕೆ ಸುಡುವ ಘಟಕಕ್ಕಿಲ್ಲ ಅವಕಾಶ
l ಈಗಿರುವ ಹಾಗೂ ಹೊಸದಾಗಿ ಇಟ್ಟಿಗೆ ಗೂಡುಗಳ ಘಟಕ ಸ್ಥಾಪನೆಗೆ ನಿಷೇಧ
l ಮರದ ಮಿಲ್‌ಗಳಿಗೆ ನಿರ್ಬಂಧ
l ಮರ ಆಧಾರಿತ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ
l ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯೊಳಗೆ ವಾಣಿಜ್ಯ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳನ್ನು ತೆರೆಯುವಂತಿಲ್ಲ
l ರೆಸಾರ್ಟ್, ವಸತಿ ಸಮುಚ್ಚಯ ಹಾಗೂ ಕೈಗಾರಿಕೆಗಳಿಗಾಗಿ ಕೃಷಿ ಹಾಗೂ ತೋಟಗಾರಿಕಾ ಭೂಮಿಗಳ ಪರಿವರ್ತನೆ ಮಾಡುವಂತಿಲ್ಲ
l ರೈಲ್ವೆ, ರೋಪ್‌ವೇ ಹಾಗೂ ಕೇಬಲ್ ಕಾರ್‌ಗಳ ಅಳವಡಿಕೆಗೆ ನಿರ್ಬಂಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.