ADVERTISEMENT

ಭೋವಿ ನಿಗಮ ಅಕ್ರಮ: ಹಿಂದಿನ ಎಂ.ಡಿಯನ್ನು ಬಂಧಿಸಿದ ಇ.ಡಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 15:31 IST
Last Updated 6 ಏಪ್ರಿಲ್ 2025, 15:31 IST
ಬಿ.ಕೆ. ನಾಗರಾಜಪ್ಪ
ಬಿ.ಕೆ. ನಾಗರಾಜಪ್ಪ   

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ನಾಗರಾಜಪ್ಪ ಅವರನ್ನು ಜಾರಿ ನಿರ್ದೆಶನಾಲಯವು (ಇ.ಡಿ) 14 ದಿನಗಳ ಕಸ್ಟಡಿಗೆ ಪಡೆದಿದೆ. 

2018–2023ರ ಅವಧಿಯಲ್ಲಿ ನಿಗಮದ ಖಾತೆಯಿಂದ ಅಕ್ರವಾಗಿ ₹97 ಕೋಟಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, ಇ.ಡಿ ಸಹ ತನಿಖೆ ಆರಂಭಿಸಿದೆ. ಭೋವಿ ನಿಗಮದ ಕಚೇರಿ, ನಾಗರಾಜಪ್ಪ ಮತ್ತು ಅವರ ಆಪ್ತರ ಮನೆಗಳಲ್ಲಿ ಇದೇ ಶುಕ್ರವಾರ ಇ.ಡಿ ಅಧಿಕಾರಿಗಳು ಶೋಧ ಆರಂಭಿಸಿದ್ದರು.

‘ನಾಗರಾಜಪ್ಪ ಅವರನ್ನು ಶನಿವಾರ ಸಂಜೆ ವಶಕ್ಕೆ ಪಡೆದು, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ವಿಚಾರಣೆಗಾಗಿ ಅವರನ್ನು 14 ದಿನಗಳವರೆಗೆ ಕಸ್ಟಡಿಗೆ ಪಡೆಯಲಾಯಿತು’ ಎಂದು ಇ.ಡಿ ತಿಳಿಸಿದೆ.

ADVERTISEMENT

‘ನಿಗಮದ ಹಣ ದುರ್ಬಳಕೆ ಸಂಬಂಧ ಕರ್ನಾಟಕ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಹಣ ದುರ್ಬಳಕೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ‍್ರಕರಣದಲ್ಲಿ ನಾಗರಾಜಪ್ಪ ಅವರದ್ದೇ ಪ್ರಮುಖ ಪಾತ್ರ ಎಂಬುದನ್ನು ಪುಷ್ಟೀಕರಿಸುವ ದಾಖಲೆಗಳು ಅವರ ಮನೆ ಮತ್ತು ನಿಗಮದ ಕಚೇರಿಯಲ್ಲಿ ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದೆ.

‘ಫಲಾನುಭವಿಗಳ ಹೆಸರಿನಲ್ಲಿ ನಾಗರಾಜಪ್ಪ ತಾನೇ ಬ್ಯಾಂಕ್ ಖಾತೆ ತೆರೆದು, ಅವುಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ವಿವಿಧ ಯೋಜನೆ ಅಡಿ ತಮ್ಮ ಪಾಲುದಾರಿಕೆ ಇರುವ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಇ.ಡಿ ಮೂಲ ಹೇಳಿದ್ದು

  •  ಪ್ರಕರಣದಲ್ಲಿ ಇನ್ನೂ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವ ಶಂಕೆ

  • ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕಲಾಗಿದೆ *

  • ಮತ್ತಷ್ಟು ಮಂದಿಯನ್ನು ವಿಚಾರಣೆಗೆ ಕರೆಯಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.