ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ. ನಾಗರಾಜಪ್ಪ, ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್. ಲೀಲಾವತಿ ಮತ್ತು ಇತರರಿಗೆ ಸೇರಿದ ₹40 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 750ಕ್ಕೂ ಹೆಚ್ಚು ನಕಲಿ ಫಲಾನುಭವಿಗಳ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಸಾಲ ಮಂಜೂರು ಮಾಡಿ, ಅದನ್ನು ತಮ್ಮ ಹಿಡಿತದಲ್ಲಿರುವ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು, ಅಕ್ರಮ ಎಸಗಿರುವ ಆರೋಪ ನಾಗರಾಜಪ್ಪ, ಲೀಲಾವತಿ ಮತ್ತು ಇತರರ ಮೇಲಿದೆ. ಈ ಸಂಬಂಧ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ.
‘ಆರೋಪಿಗಳು ನಕಲಿ ಫಲಾನುಭವಿಗಳ ಹೆಸರಿನಲ್ಲಿ ಸಾಲ, ಸಹಾಯಧನ ಮತ್ತು ನೆರವು ಬಿಡುಗಡೆ ಮಾಡಿ, ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ನಕಲಿ ಫಲಾನುಭವಿಗಳ ಹೆಸರಿಗೆ ಸಾಲ, ಸಹಾಯಧನ, ನೆರವು ಮಂಜೂರು ಮಾಡಿ, ಆದಿತ್ಯ ಎಂಟರ್‌ಪ್ರೈಸಸ್, ಸೋಮನಾಥೇಶ್ವರ ಎಂಟರ್‌ಪ್ರೈಸಸ್, ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್, ಹರ್ಣಿತಾ ಕ್ರಿಯೇಷನ್ಸ್, ಅನ್ನಿಕಾ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಈ ಖಾತೆಗಳನ್ನು ನಾಗರಾಜಪ್ಪ ಮತ್ತು ಇತರರೇ ನಿರ್ವಹಿಸುತ್ತಿದ್ದರು. ಭೋವಿ ಅಭಿವೃದ್ಧಿ ನಿಗಮದಿಂದ ವರ್ಗಾವಣೆಯಾದ ಹಣವನ್ನು ಆಸ್ತಿಗಳ ಖರೀದಿಗೆ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ’ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.
ಭೋವಿ ಅಭಿವೃದ್ಧಿ ನಿಮಗದ ಹಣವನ್ನು ಆರೋಪಿಗಳು ಐಷಾರಾಮಿ ಜೀವನ ನಿರ್ವಹಣೆ, ಸ್ಥಿರ ಮತ್ತು ಚರಾಸ್ತಿಗಳ ಖರೀದಿಗೆ ಬಳಸಿದ್ದರು. ಖರೀದಿ ಸಂದರ್ಭದಲ್ಲಿ ₹26.27 ಕೋಟಿ ಮೌಲ್ಯವಿದ್ಧ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವುಗಳ ಈಗಿನ ಮಾರುಕಟ್ಟೆ ಮೌಲ್ಯ ಅಂದಾಜು ₹ 40 ಕೋಟಿ ಇದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಈ ಪ್ರಕರಣದಲ್ಲಿ ನಾಗರಾಜಪ್ಪ ಅವರನ್ನು ಏಪ್ರಿಲ್ 5ರಂದು ಮತ್ತು ಲೀಲಾವತಿ ಅವರನ್ನು ಏ.12ರಂದು ಇ.ಡಿ ಬಂಧಿಸಿತ್ತು. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.