ADVERTISEMENT

ಭುವನೇಶ್ವರಿ ಚಿತ್ರ: ಮೊದಲ ತೈಲವರ್ಣ ಚಿತ್ರ ಬಳಕೆಗೆ ಆಗ್ರಹ

ಅಂದಾನಪ್ಪ ದೊಡ್ಡಮೇಟಿ ಅವರ ಕಲ್ಪನೆಯಂತೆ ಮೂಡಿದ್ದ ಭುವನೇಶ್ವರಿ ಚಿತ್ರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ನವೆಂಬರ್ 2022, 20:29 IST
Last Updated 22 ನವೆಂಬರ್ 2022, 20:29 IST
ಗದುಗಿನ ಚಿತ್ರಕಲಾವಿದ ಸಿ.ಎನ್.ಪಾಟೀಲ ಅವರು 1953ರಲ್ಲಿ ರಚಿಸಿರುವ ಭುವನೇಶ್ವರಿ ತೈಲವರ್ಣ ಚಿತ್ರ
ಗದುಗಿನ ಚಿತ್ರಕಲಾವಿದ ಸಿ.ಎನ್.ಪಾಟೀಲ ಅವರು 1953ರಲ್ಲಿ ರಚಿಸಿರುವ ಭುವನೇಶ್ವರಿ ತೈಲವರ್ಣ ಚಿತ್ರ   

ನರೇಗಲ್ (ಗದಗ ಜಿಲ್ಲೆ):‌ ಐವರು ಕಲಾವಿದರ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿರುವ ನಾಡದೇವತೆಯ ಅಧಿಕೃತ ಚಿತ್ರ ಬಳಕೆಗೆ ಗದಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ಸಮಗ್ರ ಕರ್ನಾಟಕದ ಕಲ್ಪನೆಯಂತೆ ರಚಿಸಲಾದ ಭುವನೇಶ್ವರಿಯ ಮೊದಲ ತೈಲವರ್ಣದ ಚಿತ್ರವನ್ನೇ ಅಧಿಕೃತಗೊಳಿಸಿ, ಕಡ್ಡಾಯ ಬಳಕೆಗೆ ಮುಂದಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

1953ರಜನವರಿ 11ರಂದು ಜಕ್ಕಲಿಯ ಅನ್ನದಾನೇಶ್ವರ ಮಠದಲ್ಲಿ, ಏಕೀಕರಣದ ರೂವಾರಿ ದಿ.ಅಂದಾನಪ್ಪ ದೊಡ್ಡಮೇಟಿ ಕಲ್ಪನೆಯಂತೆ ಗದುಗಿನ ಚಿತ್ರಕಲಾವಿದ ಸಿ.ಎನ್.ಪಾಟೀಲ ಆರು ಅಡಿ ಎತ್ತರದ ಭುವನೇಶ್ವರಿ ತೈಲವರ್ಣದ ಚಿತ್ರ ರಚಿಸಿದ್ದರು.

ADVERTISEMENT

‘ಮುಖ್ಯವಾಗಿ ಭುವನೇಶ್ವರಿ ನಿಂತ ಭಂಗಿಯೇ ಕರ್ನಾಟಕ ನಕ್ಷೆಯಾಗಿದೆ. ಎಡಗೈಯಲ್ಲಿ ಪುಸ್ತಕವಿದೆ ಹೀಗಾಗಿ ಸರಸ್ವತಿ ಎನ್ನಬಹುದು, ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದಿರುವುದರಿಂದ ಪರಮೇಶ್ವರಿ ಎನ್ನಬಹುದು. ಮತ್ತೊಂದು ಕೈಯಲ್ಲಿ ಕಮಲ ಹಿಡಿದಿರುವುದರಿಂದ ಲಕ್ಷ್ಮಿ ಎನ್ನಬಹುದು. ಬಿಳಿ ಸೀರೆ, ಹಸಿರು ಕುಪ್ಪಸ ತೊಡಿಸಲಾಗಿದೆ. ಸುತ್ತಲೂ ಹೊಯ್ಸಳರ ಲಾಂಛನ, ಬನಶಂಕರಿ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ, ಶೃಂಗೇರಿ ಶಾರದಾಂಬೆ, ಚಾಲುಕ್ಯರ ಶಿಲ್ಪಕಲೆ, ಹಂಪಿ ಕಡಲೆಕಾಳು ಗಣಪ, ಶ್ರವಣಬೆಳಗೊಳ, ಜೋಗ, ಗೋಳಗುಮ್ಮಟ, ಕರಾವಳಿ ಹಾಗೂ ಹಸಿರು ಸಿರಿಯನ್ನು ಚಿತ್ರಿಸಲಾಗಿದೆ. ಜತೆಗೆ ರತ್ನಖಚಿತ ಮೆಟ್ಟಿಲುಗಳ ಮೇಲೆ ಭುವನೇಶ್ವರಿ ಕುಳಿತಿದ್ದಾಳೆ. ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವವಿದೆ. ಹೀಗಾಗಿ ಈ ಚಿತ್ರ ವಾಸ್ತವಿಕತೆಗೆ ಹತ್ತಿರವಾಗಿದೆ’ ಎಂಬುದು ಅವರ ಅಭಿಪ್ರಾಯವಾಗಿದೆ.

‘ದೊಡ್ಡಮೇಟಿಯವರ ಕರ್ನಾಟಕ ಮಹಿಮ್ನಃ ಸ್ತೋತ್ರ ರಚನೆಗೆ ಮೂಲ ಆಕಾರವೆಂದು ಡಾ.ಸಿ.ಆರ್. ಗೋವಿಂದರಾಜು ಅವರ ‘ಕನ್ನಡಮ್ಮ’ ಕೃತಿ ದಾಖಲಿಸಿದೆ. ಈ ಕುರಿತು ಅ.ನ.ಕೃಷ್ಣರಾಯರ ‘ಕನ್ನಡಮ್ಮನ ಗುಡಿ’ ಕಾದಂಬರಿಯಲ್ಲಿಯೂ ಕಾಣಬಹುದಾಗಿದೆ. ಸಂಶೋಧಕ ಎಂ. ಚಿದಾನಂದ ಮೂರ್ತಿಯವರು ತಮ್ಮ ಪುಸ್ತಕವೊಂದಕ್ಕೆ ಈ ಚಿತ್ರವನ್ನು ಬಳಕೆ ಮಾಡಿರುವ ದಾಖಲೆಯು ಇದೆ’ ಎನ್ನುತ್ತಾರೆ ನಿವೃತ್ತ ಶಿಕ್ಷಕ ಎಂ.ಎಸ್.ಧಡೆಸೂರಮಠ.

‘ಹೀಗಾಗಿ ಇದೇ ಚಿತ್ರವನ್ನು ಕರ್ನಾಟಕ ಮಾತೆಯ ಚಿತ್ರವೆಂದು ಅಧಿಕೃತಗೊಳಿಸಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ’ ಎನ್ನುತ್ತಾರೆ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ.

ಅಂದು ರಚಿಸಿದ ನಾಡದೇವತೆ ಭುವನೇಶ್ವರಿಯ ತೈಲವರ್ಣಚಿತ್ರ ಜಕ್ಕಲಿ ಗ್ರಾಮದ ದೊಡ್ಡಮೇಟಿ ಅವರ ಮನೆಯಲ್ಲಿ ಈಗಲೂ ಇದೆ. ದೊಡ್ಡಮೇಟಿ ಅವರ ಮೊಮ್ಮಕ್ಕಳು ಭುವನೇಶ್ವರಿಗೆ ನಿತ್ಯವೂ ಪೂಜೆ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.