ADVERTISEMENT

Politics Update: ಲಾರಿ ಮಾಲೀಕರೇ ರಾಜಕೀಯ ಆಮಿಷಕ್ಕೆ ಒಳಗಾಗಬೇಡಿ: ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 14:34 IST
Last Updated 6 ಏಪ್ರಿಲ್ 2025, 14:34 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

- ಪ್ರಜಾವಾಣಿ ಚಿತ್ರ

ಕನಕಪುರ: ‘ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹೊಸದೇನಲ್ಲ. ಹಿಂದೆ ದರ ಏರಿಕೆಯಾದಾಗ ಲಾರಿ ಮಾಲೀಕರು ಯಾಕೆ ಮುಷ್ಕರ ಮಾಡಲಿಲ್ಲ? ಈಗ ರಾಜಕೀಯ ಕಾರಣಕ್ಕಾಗಿ ಮಾಡುತ್ತಿದ್ದಾರೆ. ಮುಷ್ಕರದಿಂದ ಅವರಿಗೇ ನಷ್ಟವಾಗುತ್ತದೆ. ಸುಮ್ಮನೆ ರಾಜಕೀಯಕ್ಕೆ ಒಳಗಾಗಬೇಡಿ ಎಂದು ಈಗಲೂ ಲಾರಿ ಮಾಲೀಕರಿಗೆ ನಾನು ಮನವಿ ಮಾಡುವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ADVERTISEMENT

ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ, ಲಾರಿ ಮುಷ್ಕರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮಾಲೀಕರು ಮುಷ್ಕರ ಮಾಡಿದರೆ ಅವರಿಗೇ ನಷ್ಟವಾಗುತ್ತದೆ. ಮುಷ್ಕರದಿಂದ ಆಗುವ ನಷ್ಟ ಭರಿಸಲು ಅವರಿಗೆ ಸಾಧ್ಯವಾಗುತ್ತದೆಯೇ?’ ಎಂದು ಪ್ರಶ್ನಿಸಿದರು.

‘ಮುಷ್ಕರದಿಂದಾಗಿ ಲಾರಿ ಖರೀದಿ ಇಎಂಐ, ಬಡ್ಡಿ, ಚಾಲಕರ ಸಂಬಳ ಸೇರಿದಂತೆ ಮಾಲೀಕರಿಗೆ ಹಲವು ರೀತಿಯ ಹೊರೆಯಾಗಲಿದೆ. ರಾಜಕೀಯ ಕಾರಣಕ್ಕೆ ಮುಷ್ಕರ ಮಾಡದೆ ತಮ್ಮ ಬದುಕನ್ನು ನೋಡಬೇಕು. ಸರ್ಕಾರದ ಜೊತೆಗಿದ್ದು ಸಹಕರಿಸಬೇಕು’ ಎಂದರು.

ಆಗಲೇ ನಿಲ್ಲಿಸಬಹುದಿತ್ತಲ್ಲವೆ?: ‘ಬಿಡದಿ ಟೌನ್‌ಶಿಫ್ ಯೋಜನೆಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ನೋಟಿಫಿಕೇಷನ್ ಆಗಿದೆ. ಈಗ ವಿರೋಧ ಮಾಡುವವರು ಆಗಲೇ ಯೋಜನೆ ನಿಲ್ಲಿಸಬಹುದಿತ್ತಲ್ಲವೆ? ಯೋಜನೆ ವಿರೋಧಿಸಿ ಜೆಡಿಎಸ್‌ನವರು ಏನು ಬೇಕಾದರೂ ರಾಜಕೀಯ ಮಾಡಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿ ಟೌನ್‌ಶಿಫ್‌ ನಿರ್ಮಾಣವಾಗಲಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅವರ ಭೂಮಿಗೆ ದರ ಕೊಡುತ್ತೇವೆ. ಈಗಾಗಲೇ ರೈತರೊಂದಿಗೆ ಮಾತನಾಡಿದ್ದೇವೆ. ಬೆಂಗಳೂರು ನಗರಕ್ಕಿಂತಲೂ ಹೆಚ್ಚಿನ ಹಣ ಸಿಗುವಂತೆ ಮಾಡುವೆ. ಈ ಬಗ್ಗೆ ಯಾರಿಗೂ ಆತಂಕ ಅಥವಾ ಅನುಮಾನ ಬೇಡ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.