ADVERTISEMENT

ನನಗೂ ಬಿಜೆಪಿಗೆ ಸೇರುವಂತೆ ‘ದೊಡ್ಡವರು’ ಹೇಳಿದ್ದರು; ಲಕ್ಷ್ಮಿ ಹೆಬ್ಬಾಳ್ಕರ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 14:14 IST
Last Updated 27 ನವೆಂಬರ್ 2019, 14:14 IST
   

ಬೆಳಗಾವಿ: ‘ಬಿಜೆಪಿಗೆ ಸೇರುವಂತೆ ನನಗೂ ‘ದೊಡ್ಡವರು’ ಹೇಳಿದ್ದರು. ಆದರೆ, ನಾನು ಅದನ್ನು ಒಪ್ಪಲಿಲ್ಲ. ನನ್ನನ್ನು ಇಷ್ಟು ದೊಡ್ಡವಳನ್ನಾಗಿ ಮಾಡಿದ ಪಕ್ಷ ಬಿಟ್ಟು ಬರುವುದಿಲ್ಲವೆಂದು ಹೇಳಿ ಆ ಸಭೆಯಿಂದ ಹೊರ ನಡೆದು ಬಂದಿದ್ದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಅಥಣಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ ಅವರು, ‘ಆಗ ತಾನೇ ಎಂಎಲ್‌ಎ ಚುನಾವಣೆ ಮುಗಿದಿತ್ತು. ಶಾಸಕರಾಗಿ ಆಯ್ಕೆಯಾಗಿ 7–8 ದಿನಗಳೂ ಆಗಿರಲಿಲ್ಲ. ಆಗಲೇ ಬಿಜೆಪಿ ಸೇರುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಬೆಳಗಾವಿಯಲ್ಲಿ ಸಭೆಯೊಂದು ನಡೆದಿತ್ತು. ಆ ಸಭೆಯಲ್ಲಿ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ವಿವೇಕರಾವ್‌ ಪಾಟೀಲ, ಮಹಾಂತೇಶ ಕೌಜಲಗಿ ಹಾಗೂ ‘ದೊಡ್ಡ ಮನುಷ್ಯ’ರೊಬ್ಬರು ಇದ್ದರು’ ಎಂದು ಹೇಳಿದರು.

‘ನಾವೆಲ್ಲ ಬಿಜೆಪಿಗೆ ಹೋಗೋಣವೆಂದು ಹೇಳಿದರು. ಆ ಮಾತು ಕೇಳಿದ ತಕ್ಷಣ, ನನ್ನ ಎದೆ ಒಡೆದು ಹೋಯಿತು. ಕಾಂಗ್ರೆಸ್‌ ನನ್ನನ್ನು ಇಷ್ಟು ದೊಡ್ಡವಳನ್ನಾಗಿ ಮಾಡಿದೆ. ನಾನು ಬರುವುದಿಲ್ಲವೆಂದು ಹೇಳಿದೆ. ಮಹಾಂತೇಶ ಕೌಜಲಗಿ ಕೂಡ ಬಿಜೆಪಿ ಸೇರಲ್ಲ ಎಂದರು. ನಾವಿಬ್ಬರೂ ಒಟ್ಟಿಗೆ ಸಭೆಯಿಂದ ಹೊರಗೆ ಬಂದು ಬಿಟ್ಟೇವು’ ಎಂದರು.

ADVERTISEMENT

‘ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇನ್ನೂ ರಾಜ್ಯದಲ್ಲಿ ಸರ್ಕಾರ ರಚನೆಯಾಗಿರದ ಹೊತ್ತಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದೇ ಇನ್ನೂ ನಿರ್ಧಾರವಾಗಿರದ ಸಮಯದಲ್ಲಿ ಕುಮಠಳ್ಳಿ ಬಿಜೆಪಿಗೆ ಸೇರಲು ಹೊರಟಿದ್ದರು. ಅನುದಾನ ನೀಡದಿರುವುದಕ್ಕೆ ರಾಜೀನಾಮೆ ನೀಡಿದೆ ಎಂದು ಅವರು ಹೇಳುತ್ತಿರುವುದು ಸುಳ್ಳು’ ಎಂದು ಆರೋಪಿಸಿದರು.

‘ಅವರು ಜನರಿಗೆ, ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಅವರನ್ನು ದೇವರು ಮೆಚ್ಚುವುದಿಲ್ಲ. ದುಃಖದ ಮುಖವಾಡ ಹಾಕಿಕೊಂಡು ಇದ್ದಾರೆ. ಅದರ ಹಿಂದೆ ಏನಿದೆಯೋ ನಮಗೆ ಗೊತ್ತಿಲ್ಲ’ ಎಂದು ಛೇಡಿಸಿದರು. ‘ದೊಡ್ಡ ಮನುಷ್ಯ’ ಯಾರು ಎನ್ನುವುದನ್ನು ಅವರು ಬಾಯಿ ಬಿಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.