
ಬಿವೈವಿ, ರಾಹುಲ್
ಬೆಂಗಳೂರು: ಮತಚೋರಿ ಹೆಸರಲ್ಲಿ ರಾಜಕೀಯ ಚೋರತನ ಮಾಡಲು ಹೊರಟವರಿಗೆ ಬಿಹಾರ ಚುನಾವಣೆಯಲ್ಲಿ ತಕ್ಕ ಶಾಸ್ತಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಹಾರದಲ್ಲಿ NDA ಸರ್ಕಾರ ಅನಿವಾರ್ಯ ಎಂಬ ಸಂದೇಶವನ್ನೂ ಬಿಹಾರದ ಮತದಾರರು ರವಾನಿಸಿದ್ದಾರೆ ಎಂದಿದ್ದಾರೆ.
ಚುನಾವಣೆಯಲ್ಲಿ ಮತಚೋರಿ ಹೆಸರಿನಲ್ಲಿ ಅಪಪ್ರಚಾರ ನಡೆಸಿ ರಾಜಕೀಯ ಚೋರತನ ಮಾಡಲು ಹೊರಟ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿ, ಬಿಹಾರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕಾಗಿ ತಿಣುಕಾಡಬೇಕಾದ ಸ್ಥಿತಿಗೆ ತಳ್ಳಿದ್ದಾರೆ ಎಂದು ಹೇಳಿದ್ದಾರೆ.
ಪಾಳೆಗಾರಿಕೆ ರಾಜಕೀಯಕ್ಕೆ ಇನ್ನೆಂದೂ ಅವಕಾಶ ನೀಡಲಾಗದು ಎಂಬ ಉತ್ತರವನ್ನು ಬಿಹಾರ ಮತದಾರರು ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಪ್ರಚಾರ ನಡೆಯುವುದಿಲ್ಲ. ಅಲ್ಪಸಂಖ್ಯಾತರ ಹೆಸರಿನಲ್ಲಿ ಓಲೈಕೆಯ ಮತಬ್ಯಾಂಕ್ ರಾಜಕಾರಣಕ್ಕೆ ಭವಿಷ್ಯವಿಲ್ಲ ಎನ್ನುವುದನ್ನು ಬಿಹಾರದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಬೆನ್ನತ್ತಿಹೋದ ಈವರೆಗಿನ ಚುನಾವಣೆಗಳೆಲ್ಲವೂ ಸರಣಿ ಪತನದ ಕಹಿಯನ್ನು ಕಾಂಗ್ರೆಸ್ ಅನುಭವಿಸಿದೆ. ಸದ್ಯ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡು ಕಾಂಗ್ರೆಸ್ ಹಡಗು ಸಮುದ್ರದಲ್ಲಿ ಮುಳುಗುತ್ತಿದೆ. ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳು ಕಾಂಗ್ರೆಸ್ ಪಾಲಿಗೆ ಊರುಗೋಲುಗಳಾಗಿವೆ ಎಂದರು.
ಇಂತಹ ಪರಿಸ್ಥಿತಿಯಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್‌ನ ಮುಂದಾಳುಗಳು ಜನಪರವಾಗಿ ಚಿಂತಿಸದೇ ಅಭಿವೃದ್ಧಿ ಕೆಲಸಗಳನ್ನು ಮೂಲೆಗೆ ಸರಿಸಿ, ರಾಷ್ಟ್ರಭಕ್ತ ಸಂಘಟನೆಗಳ ಕುರಿತು ಅವಿವೇಕದ ಹೇಳಿಕೆಗಳನ್ನು ನೀಡುವುದರಲ್ಲೇ ತಲ್ಲೀನರಾಗಿದ್ದಾರೆ. ಬಿಹಾರದ ಚುನಾವಣೆಯ ಫಲಿತಾಂಶದಿಂದಾದರೂ ರಾಜ್ಯದ ಕಾಂಗ್ರೆಸ್ಸಿಗರು ಪಾಠ ಕಲಿಯಲಿ. ತಮ್ಮ ಉಳಿದಿರುವ ಅವಧಿಯನ್ನಾದರೂ ಜನಪರ ಕಾರ್ಯಕ್ಕಾಗಿ ಮೀಸಲಿರಿಸಿ ಮತದಾರರ ಋಣ ತೀರಿಸಲಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.