ADVERTISEMENT

ಬಿಹಾರ ಚುನಾವಣೆ: 10 ಕ್ಷೇತ್ರಗಳಲ್ಲಿ ’ಇಂಡಿಯಾ‘ ಮೈತ್ರಿ ಪರಸ್ಪರ ಕಾದಾಟ

ಬಿಹಾರ ಚುನಾವಣೆ: 5 ಕ್ಷೇತ್ರಗಳಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ನಡುವೆಯೇ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 14:36 IST
Last Updated 18 ಅಕ್ಟೋಬರ್ 2025, 14:36 IST
   

ಪ್ರಜಾವಾಣಿ ವಾರ್ತೆ

ನವದೆಹಲಿ: ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸುವ ಉಮೇದಿನಿಂದ ಬಿಹಾರದ ರಣಾಂಗಣಕ್ಕೆ ಇಳಿದಿದ್ದ ಇಂಡಿಯಾ ಮೈತ್ರಿಕೂಟದಲ್ಲಿ ಭಾರಿ ಒಡಕು ಕಾಣಿಸಿಕೊಂಡಿದೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕನಿಷ್ಠ 10 ಕ್ಷೇತ್ರಗಳಲ್ಲಿ ಪರಸ್ಪರ ಕಾದಾಟಕ್ಕೆ ಇಳಿದಿವೆ. 

ಮೊದಲ ಹಂತದ ನಾಮಪತ್ರ ಸಲ್ಲಿಕೆ ಅವಧಿ ಮುಗಿದ ನಂತರವೂ ಮಹಾಮೈತ್ರಿಕೂಟದೊಳಗಿನ ಸೀಟುಗಳ ಕಿತ್ತಾಟ ಮುಂದುವರಿದಿದೆ. ಕಾಂಗ್ರೆಸ್ 48 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರೆ, ಸಿಪಿಐಎಂಎಲ್ 20 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತು. ಆರ್‌ಜೆಡಿ ಅಭ್ಯರ್ಥಿಗಳ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಅಭ್ಯರ್ಥಿಗಳಿಗೆ ನೇರವಾಗಿ ಬಿ–ಫಾರಂ ಹಂಚಿದೆ. ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಉನ್ನತ ನಾಯಕರು ಸರಣಿ ಸಮಾಲೋಚನೆಗಳನ್ನು ನಡೆಸಿದ ಬಳಿಕವೂ ಕಗ್ಗಂಟು ಬಗೆಹರಿದಿಲ್ಲ. 

ADVERTISEMENT

ಐದು ಕ್ಷೇತ್ರಗಳಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪರಸ್ಪರ ಅಭ್ಯರ್ಥಿಗಳನ್ನು ಇಳಿಸಿವೆ. ಮೂರು ‌ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಸಿಪಿಎಂ ಹೋರಾಟಕ್ಕೆ ಅಣಿಯಾಗಿವೆ. ಆರ್‌ಜೆಡಿ ಹಾಗೂ ವಿಐಪಿ ಒಂದು ಕ್ಷೇತ್ರಗಳಲ್ಲಿ ಪರಸ್ಪರ ಹೋರಾಡುತ್ತಿವೆ. ಮಿತ್ರ ಪಕ್ಷಗಳ ನಡೆಯಿಂದ ಬೇಸರಗೊಂಡಿರುವ ವಿಐಪಿ ಮುಖ್ಯಸ್ಥ ಮುಕೇಶ್‌ ಸಹಾನಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಕಾಣಿಸಿಕೊಂಡಿದ್ದ ಒಗ್ಗಟ್ಟು ಈಗ ಮರೆಯಾಗಿದೆ. ಇಂಡಿಯಾ ಬಣದ ಬಿಹಾರ ಅವತಾರವಾದ ‘ಮಹಾಘಟಬಂಧನ್‘ ಛಿದ್ರಗೊಂಡಂತೆ ಕಾಣುತ್ತಿದೆ. ಎನ್‌ಡಿಎ ಪ್ರತಿಸ್ಪರ್ಧಿಗಳೊಂದಿಗೆ ಹೋರಾಡುವುದಕ್ಕಿಂತ ಹೆಚ್ಚಾಗಿ, ಇಂಡಿಯಾ ಬಣದ ಅಭ್ಯರ್ಥಿಗಳು ತಮ್ಮದೇ ಆದ ಮಿತ್ರಪಕ್ಷಗಳ ವಿರುದ್ಧ ಹೋರಾಡುತ್ತಿರುವಂತೆ ಕಾಣುತ್ತಿದೆ. ‘ಇಂಡಿಯಾ‘ ಭಿನ್ನಮತವನ್ನು ಎನ್‌ಡಿಎ ನಾಯಕರು ಲೇವಡಿ ಮಾಡಿದ್ದಾರೆ. 

ಎಲ್ಲೆಲ್ಲಿ ಮೈತ್ರಿ ಬಿಕ್ಕಟ್ಟು?: 

ವೈಶಾಲಿ ಜಿಲ್ಲೆಯ ಲಾಲ್‌ಗಂಜ್‌ನಲ್ಲಿ ಆರ್‌ಜೆಡಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಗೆ ಇಳಿದಿದೆ. ಮಹಾಘಟಬಂಧನ್‌ನ ಅಘೋಷಿತ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ಲಾಲ್‌ಗಂಜ್‌ನ ಮಾಜಿ ಶಾಸಕ ಮುನ್ನಾ ಶುಕ್ಲಾ ಅವರ ಪುತ್ರಿ ಶಿವಾನಿ ಶುಕ್ಲಾ ಅವರನ್ನು ಕಣಕ್ಕಿಳಿಸಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಕೋಟೆಯಾಗಿದ್ದ ಕ್ಷೇತ್ರದಿಂದ ಕೈ ಪಾಳಯವು ಆದಿತ್ಯ ಕುಮಾರ್ ಅವರನ್ನು ಹುರಿಯಾಳುವನ್ನಾಗಿ ಮಾಡಿದೆ. 

ರಾಜಪಕರ್‌ ಕ್ಷೇತ್ರದಲ್ಲಿ 2020ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಗಳಿಸಿತ್ತು. ಈ ಮೀಸಲು ಕ್ಷೇತ್ರದಲ್ಲಿ ಪಕ್ಷವು ಹಾಲಿ ಶಾಸಕಿ ಪ್ರತಿಭಾ ದಾಸ್‌ ಟಿಕೆಟ್‌ ಕೊಟ್ಟಿದೆ. ಇಲ್ಲಿ ಸಿಪಿಐ ಮೈತ್ರಿ ಧರ್ಮವನ್ನು ಗಾಳಿಗೆ ತೂರಿದೆ. ಮೋಹಿತ್‌ ಪಾಸ್ವಾನ್‌ ಅವರನ್ನು ಎಡ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. 

ಏಟಿಗೆ ಇದಿರೇಟು ನೀಡಿರುವ ಕೈ ಪಾಳಯವು ಬಚ್ವಾರಾದಲ್ಲಿ ಪ್ರಕಾಶ್‌ ದಾಸ್‌ ಅವರನ್ನು ಉಮೇದುವಾರರನ್ನಾಗಿ ಮಾಡಿದೆ. ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಅವಧೇಶ್ ರೈ ಅವರನ್ನು ಸಿಪಿಐ ಈ ಹಿಂದೆಯೇ ನಾಮನಿರ್ದೇಶನ ಮಾಡಿತ್ತು. 2020ರ ಚುನಾವಣೆಯಲ್ಲಿ ರೈ ಅವರು ಬಿಜೆಪಿಯ ಸುರೇಂದ್ರ ಮೆಹ್ತಾ ವಿರುದ್ಧ 484 ಮತಗಳಿಂದ ಸೋತಿದ್ದರು. ಬಚ್ವಾರಾ ಸಾಂಪ್ರದಾಯಿಕವಾಗಿ ಎಡಪಕ್ಷಗಳ ಭದ್ರಕೋಟೆ. ಕಾಂಗ್ರೆಸ್‌ನ ವಾದವೆಂದರೆ, 2015ರ ಚುನಾವಣೆಯಲ್ಲಿ ಪ್ರಕಾಶ್ ದಾಸ್‌ ತಂದೆ ರಾಮ್‌ದೇವ್‌ ರೈ ಜಯಿಸಿದ್ದರು. ಹೀಗಾಗಿ, ಈ ಸಲ ಮಗನಿಗೆ ಟಿಕೆಟ್ ಕೊಡಲಾಗಿದೆ.

ರೊಸೆರಾ ಮೀಸಲು ಕ್ಷೇತ್ರದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಕಾಂಗ್ರೆಸ್ ಪಕ್ಷವು ಮಾಜಿ ಐಪಿಎಸ್ ಅಧಿಕಾರಿ ಬಿ.ಕೆ. ರವಿ ಅವರನ್ನು ಕಣಕ್ಕಿಳಿಸಿದೆ. ಆದರೆ, ಲಕ್ಷ್ಮಣ್ ಪಾಸ್ವಾನ್ ಅವರನ್ನು ಸಿಪಿಐ ನಾಮನಿರ್ದೇಶನ ಮಾಡಿದೆ.

ನಳಂದ ಜಿಲ್ಲೆಯ ಬಿಹಾರ್‌ಶರೀಫ್‌ನಲ್ಲಿಯೂ  ಸಿಪಿಐ ವಿರುದ್ಧ ಕಾಂಗ್ರೆಸ್‌ ಪೈಪೋಟಿ ನಡೆಸುತ್ತಿದೆ. ಅಲ್ಲಿ ಎಡಪಕ್ಷದ ಅಭ್ಯರ್ಥಿ ಶಿವಪ್ರಸಾದ್ ಯಾದವ್ ವಿರುದ್ಧ ಉಮೈರ್ ಖಾನ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. 

ವೈಶಾಲಿ ಕ್ಷೇತ್ರದಲ್ಲಿ ಆರ್‌ಜೆಡಿ–ಕಾಂಗ್ರೆಸ್‌ ನಡುವೆ ಒಳಜಗಳ ಉಂಟಾಗಿದೆ. ಕಳೆದ ವಾರವಷ್ಟೇ ಪಕ್ಷಕ್ಕೆ ಸೇರಿದ್ದ ಅಜಯ್‌ ಕುಶ್ವಾಹ ಅವರಿಗೆ ಲಾಲು ಪಕ್ಷವು ಟಿಕೆಟ್‌ ಕೊಟ್ಟಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಸಂಜೀವ್ ಸಿಂಗ್ ಅವರನ್ನು ಸ್ಪರ್ಧಿಯನ್ನಾಗಿ ಮಾಡಿದೆ. 

ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಸ್ಪರ್ಧಿಸುತ್ತಿರುವ ತಾರಾಪುರ ಕ್ಷೇತ್ರದಲ್ಲೂ ಇದೇ ರೀತಿ ಆಗಿದೆ. ಅರುಣ್‌ ಶಾ ಅವರನ್ನು ಆರ್‌ಜೆಡಿ ಕಣಕ್ಕಿಳಿಸಿದರೆ, ಅದರ ಮಿತ್ರ ವಿಐಪಿ ಅದೇ ಕ್ಷೇತ್ರದಿಂದ ಸಕಲ್ದಿಯೊ ಬಿಂದ್ ಅವರನ್ನು ನಾಮನಿರ್ದೇಶನ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.