ADVERTISEMENT

ಮತಕ್ಕಾಗಿ ಬಿಹಾರಿಗಳಿಗೆ ಭೂಮಿಯನ್ನೇ ಅಡವಿಟ್ಟ ಡಿ.ಕೆ. ಶಿವಕುಮಾರ್: ಜೆಡಿಎಸ್‌ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2025, 10:14 IST
Last Updated 3 ನವೆಂಬರ್ 2025, 10:14 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಬಿಹಾರ ಸಂಘ ಸಂಸ್ಥೆಗಳಿಗೆ ನಿವೇಶನ ಒದಗಿಸಲು ಒಂದು ತಿಂಗಳ ಒಳಗೆ ಅಧಿಸೂಚನೆ ಹೊರಡಿಸುತ್ತೇವೆ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿಕೆಗೆ ಜೆಡಿಎಸ್‌ ಕಿಡಿಕಾರಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪಕ್ಷ, 'ನಮ್ಮ ತೆರಿಗೆ, ನಮ್ಮ ಹಕ್ಕು' ಎಂದು ಗಂಟಲು ಹರಿದುಕೊಳ್ಳುವ ರಾಜ್ಯ ಕಾಂಗ್ರೆಸ್ಸಿಗರೇ.. ನಿಮ್ಮ ಢೋಂಗಿತನಕ್ಕೆ ಏನೆನ್ನಬೇಕು ? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ಧಾರೆ ಎರೆಯಲು ನಿಮ್ಮ ದೈನೇಸಿತನಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‌ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್‌ ಗುಲಾಮಗಿರಿಗಾಗಿ ಪರಭಾಷಿಕರ ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ ಎಂದಿದೆ.

ADVERTISEMENT

ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತದೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ‌ ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರೇ ನಿಮ್ಮ ನಾಲಿಗೆಗಳು ಏಕೆ ಅಪಶೃತಿ ನುಡಿಯುತ್ತಿವೆ ಎಂದು ಪ್ರಶ್ನಿಸಿದೆ.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ ಕೊಡುವುದಾಗಿ ಆಮಿಷ ಒಡ್ಡಿದ್ದೀರಿ. ಇದು ಎಷ್ಟು ಸರಿ?. ಕಾಂಗ್ರೆಸ್‌ ಓಲೈಕೆ ರಾಜಕಾರಣಕ್ಕೆ ಧಿಕ್ಕಾರ. ಕನ್ನಡಿಗರ ತೆರಿಗೆ ದುಡ್ಡು, ಕಾಂಗ್ರೆಸ್ಸಿನ ಜಾತ್ರೆ. ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ನಿಮಗೆ ನಾಚಿಕೆ, ಸಂಕೋಚ ಆಗುವುದಿಲ್ಲವೇ ಎಂದು ಕಿಡಿಕಾರಿದೆ.

ಡಿಕೆಶಿ ಹೇಳಿದ್ದೇನು?

ಬಿಹಾರದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ತೆರಳುವವರಿಗೆ ಮೂರು ದಿನ ರಜೆ ನೀಡಲು ಅವರು ಕೆಲಸ ಮಾಡುವ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಬಿಹಾರದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದ್ದರು.

‘ಬಿಹಾರದವರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಅತ್ಯುತ್ತಮ ‌ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿರುತ್ತಿರಲಿಲ್ಲ. ನಿಮ್ಮ ಸಂಘದ ಸಮುದಾಯ ಭವನಕ್ಕೆ ನಿವೇಶನ ನೀಡಲಾಗುವುದು. ಸಂಘ ಸಂಸ್ಥೆಗಳಿಗೆ ನಿವೇಶನ ಒದಗಿಸಲು ಒಂದು ತಿಂಗಳ ಒಳಗೆ ಅಧಿಸೂಚನೆ ಹೊರಡಿಸುತ್ತೇವೆ’ ಎಂದು ಹೇಳಿದ್ದರು.