ADVERTISEMENT

ಮೋಟಾರು ಸೈಕಲ್ ಸಾರಿಗೆ ವಾಹನ ಎನಿಸುವುದಿಲ್ಲ: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 0:30 IST
Last Updated 15 ನವೆಂಬರ್ 2025, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪ್ರಯಾಣಿಕರನ್ನು ಸಾಗಿಸಲು ಅಥವಾ ಬಾಡಿಗೆಗೆ ಅವುಗಳನ್ನು ಬಳಕೆ ಮಾಡಬಹುದು ಎಂದು ಶಾಸನದಲ್ಲಿ ಯಾವುದೇ ವ್ಯಾಖ್ಯಾನ ಇಲ್ಲದಿರುವ ಕಾರಣ ಮೋಟಾರು ಸೈಕಲ್‌ಗಳು ಸಾರಿಗೆ ವಾಹನ ಎನಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ವರೀಕೃತಿ ಮಹೇಂದ್ರ ರೆಡ್ಡಿ, ಮಧು ಕಿರಣ್‌, ರೊಪ್ಪೇನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಬೈಕ್‌ ಟ್ಯಾಕ್ಸಿ ವೆಲ್ಫೇರ್‌ ಅಸೋಸಿಯೇಷನ್‌ ಪ್ರತಿನಿಧಿಗಳು ಸಲ್ಲಿಸಿರುವ ರಿಟ್‌ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ (ಎಜಿ) ಕೆ.ಶಶಿಕಿರಣ್‌ ಶೆಟ್ಟಿ ಅವರು, ‘ಮೋಟಾರ್‌ ಸೈಕಲ್‌, ಮೋಟಾರ್‌ ಕ್ಯಾಬ್‌ ವ್ಯಾಖ್ಯಾನದ ಅಡಿ ಬರುವುದಿಲ್ಲ’ ಎಂದು ನ್ಯಾಯಪೀಠಕ್ಕೆ ಅರುಹಿದರು. 

ADVERTISEMENT

‘ಯಾವುದೇ ಮೋಟಾರ್‌ ಸೈಕಲ್‌ ಅನ್ನು ಸಾರಿಗೆ ವಾಹನ ಎಂದು ಪರಿಗಣಿಸಬೇಕಾದರೆ ಅನುಮತಿ ಕಡ್ಡಾಯ. ಮೋಟಾರ್‌ ಸೈಕಲ್‌ ಎಂಬುದು ಪ್ರಯಾಣಿಕರನ್ನು ಒತ್ತೊಯ್ಯುವ ವಾಹನವಲ್ಲ. ಇದನ್ನು ಬಾಡಿಗೆ ಅಥವಾ ಹಣ ಸಂಪಾದಿಸಲು ಬಳಕೆ ಮಾಡಲಾಗದು. ಇವಿ ಮೋಟಾರ್‌ ಸೈಕಲ್‌ಗಳಿಗೆ ವಿಶೇಷ ವಿನಾಯಿತಿ ನೀಡಲಾಗಿತ್ತು. ಅನುಮತಿ ನೀಡುವುದು ರಾಜ್ಯ ಸರ್ಕಾರದ ವಿಶೇಷ ಅಧಿಕಾರವಾಗಿದೆ’ ಎಂದರು.

ಅಡ್ವೊಕೇಟ್‌ ಜನರಲ್‌ ಅವರ ಸುದೀರ್ಘ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳ ಪ್ರತ್ಯುತ್ತರಕ್ಕೆ ನಿಗದಿಗೊಳಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು. ‘ಮೋಟಾರು ವಾಹನಗಳ ಕಾಯ್ದೆ–1988ರ ಅನ್ವಯ ಮಾರ್ಗಸೂಚಿ ರೂಪಿಸುವವರೆಗೆ ಬೈಕ್‌ ಟ್ಯಾಕ್ಸಿ ಸೇವೆಯನ್ನು ಮುಂದುವರಿಸುವಂತಿಲ್ಲ’ ಎಂಬ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.