
ಬೆಂಗಳೂರು: ‘ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರ ಪಾತ್ರರ ಜೊತೆಗೆ ನಮ್ಮದೇ ಸ್ಥಳೀಯ ಹಿರಿ–ಕಿರಿಯ ಪೊಲೀಸ್ ಅಧಿಕಾರಿಗಳ ಪಾತ್ರವೂ ಇದೆ. ಇದೊಂದು ಸಂಘಟಿತ ಅಪರಾಧ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಪ್ರಕರಣದ ಐದನೇ ಆರೋಪಿಯಾಗಿರುವ ಬಸವರಾಜ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿಐಡಿ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಇದೇ ಹಿನ್ನೆಲೆಯಲ್ಲಿ ಕೆಲವು ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಕೂಡಾ ಜಾರಿ ಮಾಡಲಾಗಿದ್ದು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
‘ನಾವು ಸಾಮಾನ್ಯ ವ್ಯಕ್ತಿಯ ಜೊತೆ ವ್ಯವಹರಿಸುತ್ತಿಲ್ಲ. ಶಾಸಕ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಬಲವಾಗಿರುವ ವ್ಯಕ್ತಿಯೊಬ್ಬರ ಜೊತೆ ವ್ಯವಹರಿಸುತ್ತಿದ್ದೇವೆ. ಇದೆಲ್ಲವನ್ನೂ ಮರೆಮಾಚಿ ರಾಜಕೀಯ ದುರುದ್ದೇಶದಿಂದ ಬೈರತಿ ಬಸವರಾಜು ಅವರನ್ನು ಬಂಧಿಸಲು ಪ್ರಾಸಿಕ್ಯೂಷನ್ ಯತ್ನಿಸುತ್ತಿದೆ ಎಂದು ಹೇಳುವುದು ಶುದ್ಧ ಅಪಪ್ರಚಾರ. ಅಧಿಕಾರಿಗಳ ಪಾತ್ರ ಬಯಲು ಮಾಡಲು ಬೈರತಿ ಅವರನ್ನು ಕಸ್ಟಡಿಗೆ ಪಡೆದೇ ತನಿಖೆ ನಡೆಸಬೇಕಿದೆ’ ಎಂದರು.
‘ಬಿಕ್ಲು ಶಿವು ತಾಯಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನೇ ಬೈರತಿ ಬಸವರಾಜು ಗುರಾಣಿಯಂತೆ ಬಳಸುತ್ತಿದ್ದಾರೆ. ಸಂತ್ರಸ್ತೆ ಹೇಗೆಲ್ಲಾ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂಬುದು ಗೊತ್ತಿದೆ. ಇದರಲ್ಲಿ ನಮ್ಮ ಪೊಲೀಸರೂ ಭಾಗಿಯಾಗಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಬೇಕಿದೆ. ಅದಕ್ಕಾಗಿ ಬೈರತಿ ಬಸವರಾಜು ಅವರನ್ನು ಕಸ್ಟಡಿಗೆ ಪಡೆದೇ ತನಿಖೆ ನಡೆಸಬೇಕಿದೆ. ಇದರಲ್ಲಿ ಸಂಘಟಿತ ಅಪರಾಧ ಮತ್ತು ಕೊಲೆ ನಡೆದಿದೆ’ ಎಂದು ಬಲವಾಗಿ ಪ್ರತಿಪಾದಿಸಿದರು.