ADVERTISEMENT

ಕನ್ನಡಕ್ಕೆ ಅಗ್ರಸ್ಥಾನ: ಮಸೂದೆ ಅಂಗೀಕಾರ

ಜೆಡಿಎಸ್‌ ಸಭಾ‌ತ್ಯಾಗದ ಮಧ್ಯೆ ‘ಬಿಎಂಎಸ್ ವಿವಿ’ ಮಸೂದೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 22:31 IST
Last Updated 23 ಫೆಬ್ರುವರಿ 2023, 22:31 IST
   

ಬೆಂಗಳೂರು: ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶ ಕಲ್ಪಿಸಲು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ–2022’ ರೂಪಿಸುವ ಉದ್ದೇಶದಿಂದ ಸರ್ಕಾರ ಮಂಡಿಸಿದ ಮಸೂದೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರಗೊಂಡಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಮಸೂದೆಯನ್ನು ಮಂಡಿಸಿದರು. ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಇದೇ ಮಸೂದೆಯನ್ನು ಮಂಡಿಸಲಾಗಿತ್ತು. ಆಗ ಸಾರ್ವಜನಿಕ ವಲಯದಿಂದ ಕೆಲವು ಆಕ್ಷೇಪಣೆಗಳು, ಸಲಹೆಗಳು ಬಂದ ಕಾರಣ, ಅದರಲ್ಲಿನ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿ ಮತ್ತೆ ಮಂಡಿಸಲಾಯಿತು.

ಕರ್ನಾಟಕದಲ್ಲಿ ಅಥವಾ ಇತರ ಯಾವುದೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಓದಿದ
ವಿದ್ಯಾರ್ಥಿಗಳಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದಲ್ಲಿ
ರಾಜ್ಯ ಸರ್ಕಾರ ಮೀಸಲಾತಿ ನೀಡಲು ಮಸೂದೆ ಅವಕಾಶ ಕಲ್ಪಿಸಲಿದೆ. ಅಲ್ಲದೆ, ರಾಜ್ಯ ಸರ್ಕಾರ ಅಥವಾ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಲಿದೆ. ಕನ್ನಡವನ್ನು ಅಧಿಕೃತ ರಾಜ್ಯ ಭಾಷೆ ಎಂದು ತೀರ್ಮಾನಿಸುವ, ಸರ್ಕಾರದ ಎಲ್ಲ ವ್ಯವಹಾರಗಳಲ್ಲಿ,
ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಪ್ರಸ್ತಾವ ಮಸೂದೆಯಲ್ಲಿದೆ.

ADVERTISEMENT

ಮಸೂದೆಯಲ್ಲಿರುವ ಅಂಶಗಳನ್ನು ಜಾರಿಗೊಳಿಸಲು ರಾಜ್ಯಮಟ್ಟದ ಸಮಿತಿ ರಚನೆಯಾಗಲಿದೆ. ಸಮಿತಿಯಲ್ಲಿ ಅಧಿಕಾರಿಗಳು ಮತ್ತು ಸಚಿವರು ಇರಲಿದ್ದಾರೆ. ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಸಮಿತಿಗೆ ಅಧಿಕಾರ ನೀಡಲಾಗಿದೆ. ಈ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಆಹ್ವಾನಿತ
ಸದಸ್ಯರಾಗಿರುತ್ತಾರೆ.

‘ಬಿಎಂಎಸ್ ವಿ.ವಿ’ ಮಸೂದೆಗೆ ಜೆಡಿಎಸ್ ವಿರೋಧ: ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನ ಅಡಿಯಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲು ‘ಬಿಎಂಎಸ್ ವಿಶ್ವವಿದ್ಯಾಲಯ ಕಾಯ್ದೆ –2023’ ರೂಪಿಸುವ ಉದ್ದೇಶದಿಂದ ಮಂಡಿಸಿದ ಮಸೂದೆ ಜೆಡಿಎಸ್‌ ಸದಸ್ಯರ ಸಭಾತ್ಯಾಗದ ಮಧ್ಯೆಯೇ ಅಂಗೀಕಾರಗೊಂಡಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಮಸೂದೆ ಮಂಡಿಸುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆಡಿಎಸ್‌ ಸದಸ್ಯರು, ‘ಟ್ರಸ್ಟಿಗಳ ನೇಮಕ, ಜಮೀನು ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿದ್ದು, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಬಾರದು’ ಎಂದು ಪಟ್ಟು ಹಿಡಿದರು. ಆಗ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಟ್ರಸ್ಟ್‌ನ ಭೂ ವಿವಾದಕ್ಕೂ ವಿಶ್ವವಿದ್ಯಾಲಯ ಸ್ಥಾಪನೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಸಮರ್ಥಿಸಿದರು. ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪ‍ಡಿಸಿ ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ವೃತ್ತಿಪರ ತೆರಿಗೆ ಕಾಯ್ದೆ ತಿದ್ದುಪಡಿಗೆ ಮಸೂದೆ: 2023–24ನೇ ಬಜೆಟ್‌ನಲ್ಲಿ ಘೋಷಿಸಿದಂತೆ ಕಡಿಮೆ ವರಮಾನದ ವರ್ಗಕ್ಕೆ ಪರಿಹಾರ ನೀಡಲು ಸಂಬಳ ಅಥವಾ ಮಜೂರಿಯನ್ನು ಪಡೆಯುವ ನೌಕರರಿಗೆ ತೆರಿಗೆ ವಿನಾಯಿತಿಯನ್ನು ₹ 15 ಸಾವಿರದಿಂದ ₹ 25 ಸಾವಿರಕ್ಕೆ ಏರಿಸುವ ಉದ್ದೇಶದಿಂದ ವೃತ್ತಿಪರ ತೆರಿಗೆ ಕಾಯ್ದೆ ತಿದ್ದುಪಡಿಗೆ ಮಂಡಿಸಿದ ‘ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ)–2023’ ಮಸೂದೆಗೂ ವಿಧಾನಸಭೆ ಅಂಗೀಕಾರ ನೀಡಿತು.

ವಕೀಲರ ರಕ್ಷಣಾ ಮಸೂದೆಗೆ ಒಪ್ಪಿಗೆ

ವಕೀಲರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿರುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ–2023’ಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ ಅಂಗೀಕಾರ ನೀಡಿದೆ.

ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ರಾಜ್ಯದಾದ್ಯಂತ ವಕೀಲರ ಸಂಘ ಮತ್ತು ಪರಿಷತ್‌ ಸರ್ಕಾರವನ್ನು ಪದೇ ಪದೇ ಆಗ್ರಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.