
ಬೆಂಗಳೂರು: ವಿವಿಧ ಇಲಾಖೆಗಳಲ್ಲಿರುವ ಹೊರಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು 2028ರ ಮಾರ್ಚ್ 31ರ ಒಳಗೆ ಸಂಪೂರ್ಣವಾಗಿ ರದ್ದುಗೊಳಿಸುವ ಉದ್ದೇಶದಿಂದ ‘ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ– 2025’ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಹೊಸ ಕಾಯ್ದೆ ಜಾರಿಯಾದ ಬಳಿಕ, ನಿಯಮ ಉಲ್ಲಂಘಿಸಿ ಹೊರಗುತ್ತಿಗೆಯಡಿ ನೇಮಕಾತಿ ಮಾಡಿದರೆ ಅಥವಾ ನಿಗದಿತ ಅವಧಿಯನ್ನು ಮೀರಿ ಹೊರಗುತ್ತಿಗೆ ಒಪ್ಪಂದ ಮುಂದುವರಿಸಿದರೆ, ಅಂಥವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ವಿಧಿಸಲು ಕೂಡಾ ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮಸೂದೆಯ ಕರಡು ಸಿದ್ಧವಾಗಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.
ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ವಲಯದ ನಿಗಮಗಳು, ಮಂಡಳಿಗಳು, ಉದ್ದಿಮೆಗಳು, ಪ್ರಾಧಿಕಾರಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಕಂಪನಿಗಳಲ್ಲಿ ಮಂಜೂರಾಗಿರುವ ಮೂರು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಮತ್ತು ಇತರ ವಿಧಾನಗಳ ಮೂಲಕ ಭರ್ತಿ ಮಾಡಲಾಗಿದೆ. ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ದಿನದಿಂದ ಈ ರೀತಿಯ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ಎಲ್ಲ ನೇಮಕಾತಿಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.
ಹೊರಗುತ್ತಿಗೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರ ಕೆಪಿಎಸ್‌ಸಿ ಅಥವಾ ಯಾವುದೇ ನೇಮಕಾತಿ ಪ್ರಾಧಿಕಾರವು ವಿವಿಧ ಇಲಾಖೆಗಳಲ್ಲಿನ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ವೃಂದದ ಹುದ್ದೆಗಳಿಗೆ ನಡೆಸುವ ಎಲ್ಲ ನೇರ ನೇಮಕಾತಿಗಳಲ್ಲಿ, ಹೊರ ಗುತ್ತಿಗೆ ವ್ಯವಸ್ಥೆಯಡಿ ಕೆಲಸ ಮಾಡಿದವರಿಗೆ ಕೃಪಾಂಕ ನೀಡಿ ಮತ್ತು ವಯೋಮಿತಿ ಸಡಿಲಿಸಿ ಅನುಕೂಲ ಮಾಡಿಕೊಡುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ.
ಖಾಸಗಿ ಹೊರಗುತ್ತಿಗೆ ಸಂಸ್ಥೆಗಳು, ಗುತ್ತಿಗೆದಾರರು ಅಥವಾ ಯಾವುದೇ ಮೂರನೇ ವ್ಯಕ್ತಿಯ ಮಧ್ಯವರ್ತಿಗಳ ಮೂಲಕ ರಾಜ್ಯ ಸರ್ಕಾರದ ವ್ಯಾಪ್ತಿ ಅಥವಾ ನಿಯಂತ್ರಣದಲ್ಲಿರುವ ಇಲಾಖೆಗಳು ಮತ್ತು ಸಂಸ್ಥೆಗಳು ನೇಮಕಾತಿ ಮಾಡಿಕೊಂಡು ಮಾನವ ಸಂಪನ್ಮೂಲವನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸಲು ಈ ಮಸೂದೆ ತರಲಾಗುತ್ತಿದೆ. ಅಲ್ಲದೆ, ಈ ರೀತಿ ನೇಮಿಸಿಕೊಂಡು ನಡೆಸುವ ಎಲ್ಲ ರೀತಿಯ ಶೋಷಣೆ ಮತ್ತು ಅಮಾನವೀಯ ಪದ್ಧತಿಗಳನ್ನು ಕಾನೂನುಬಾಹಿರವೆಂದು ಘೋಷಿಸುವುದು ಕೂಡಾ ಉದ್ದೇಶವಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಕುರಿತು ಚರ್ಚಿಸಿ, ಶಿಫಾರಸು ಮಾಡಲು ಕಾನೂನು ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ಸರ್ಕಾರ ರಚಿಸಿತ್ತು. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಇದೇ ಆಗಸ್ಟ್ 19ರಂದು ನೀಡಿದ್ದ ತೀರ್ಪಿನಲ್ಲಿದ್ದ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಮಸೂದೆಗೆ ರೂಪು ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಇಲಾಖೆಯ ಮೂಲಗಳು ತಿಳಿಸಿವೆ.
‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಂವಿಧಾನದ ವಿಧಿ 15 ಮತ್ತು 16ರ ಆಶಯಗಳು ಉಲ್ಲಂಘನೆ ಆಗದಂತೆ ಭರ್ತಿ ಮಾಡಬೇಕಿದೆ. ಸದ್ಯ ಹೊರಗುತ್ತಿಗೆ, ಒಳಗುತ್ತಿಗೆ, ದಿನಗೂಲಿ ಹಾಗೂ ಇತರೆ ವ್ಯವಸ್ಥೆಗಳ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಪ್ರತಿಭಾನ್ವಿತ, ಅರ್ಹ ಅಭ್ಯರ್ಥಿಗಳು ಹುದ್ದೆ ವಂಚಿತರಾಗುತ್ತಿದ್ದಾರೆ. ಜೊತೆಗೆ, ಸಂವಿಧಾನದ ಆಶಯಗಳ ಉಲ್ಲಂಘನೆಯೂ ಆಗುತ್ತಿದೆ. ಹೀಗಾಗಿ, ಹೊರಗುತ್ತಿಗೆ ನೌಕರರ ಸೇವೆಯನ್ನು ಖಾಸಗಿ, ಸರ್ಕಾರೇತರ ಸಂಸ್ಥೆಗಳಿಂದ (ಎನ್‌ಜಿಒ) ಪಡೆಯುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಅಗತ್ಯವಿದೆ ಎಂದು ಎಚ್.ಕೆ. ಪಾಟೀಲ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ’ ಎಂದೂ ಮೂಲಗಳು ಹೇಳಿವೆ.
–––
ಹೊರಗುತ್ತಿಗೆ ವ್ಯವಸ್ಥೆ ಮುಂದುವರಿಸುವುದು ಸಂವಿಧಾನ ಉಲ್ಲಂಘನೆಯಾಗಿದೆ. ಹೀಗಾಗಿ ಹಂತ ಹಂತವಾಗಿ ಹೊರಗುತ್ತಿಗೆ ನೌಕರರ ಸೇವಾ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು
–ಎಚ್.ಕೆ. ಪಾಟೀಲ ಕಾನೂನು ಸಚಿವ
ಮಸೂದೆಯಲ್ಲಿ ಏನಿದೆ?
ಅಸ್ತಿತ್ವದಲ್ಲಿರುವ ಎಲ್ಲ ಖಾಸಗಿ ಹೊರಗುತ್ತಿಗೆ ಒಪ್ಪಂದಗಳನ್ನು ಹಂತ ಹಂತವಾಗಿ ಕೊನೆಗೊಳಿಸಬೇಕು. 2028ರ ಮಾರ್ಚ್ 31ರ ಒಳಗೆ ಹೊರಗುತ್ತಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ‘ಬೀದರ್ ಮಾದರಿ’ ಯಲ್ಲಿ ಜಿಲ್ಲಾಮಟ್ಟದಲ್ಲಿ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘಗಳ ಮೂಲಕ ಗುತ್ತಿಗೆ ವ್ಯವಸ್ಥೆಯನ್ನು ಮುಂದುವರಿಸಬಹುದು. ಅಲ್ಲದೆ ಹಾಲಿ ಇರುವ ಹೊರಗುತ್ತಿಗೆ ನೌಕರರನ್ನು ಮುಂದುವರಿಸಲು ಕೂಡಾ ಅವಕಾಶ ನೀಡಲಾಗುವುದು. ಜೊತೆಗೆ ಈ ರೀತಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೀಸಲಾತಿ ನಿಯಮ ಪಾಲಿಸಲು ಮತ್ತು ಹೀಗೆ ನೇಮಕಗೊಂಡವರಿಗೆ ಕಾನೂನು ಪ್ರಕಾರ ಸಿಗಬೇಕಾದ ಎಲ್ಲ ಸವಲತ್ತುಗಳು ಕಡ್ಡಾಯವಾಗಿ ಸಿಗುವಂತೆ ಮಾಡುವ ಪ್ರಸ್ತಾವ ಈ ಮಸೂದೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.