
ಮೀಸಲಾತಿ (ಸಾಂಕೇತಿಕ ಚಿತ್ರ)
ಸುವರ್ಣ ವಿಧಾನಸೌಧ(ಬೆಳಗಾವಿ): ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ಚಾರಿತ್ರಿಕ ತೀರ್ಮಾನ ಕೈಗೊಂಡಿದ್ದ ರಾಜ್ಯ ಸರ್ಕಾರ, ಈ ಸೌಲಭ್ಯದ ಕಾನೂನಾತ್ಮಕ ರಕ್ಷಣೆಗಾಗಿ ರಚಿಸಲಾಗಿರುವ ಮಸೂದೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಪರಿಶಿಷ್ಟ ಜಾತಿಯವರಿಗೆ ಲಭ್ಯ ಇರುವ ಶೇ 17 ರಷ್ಟು ಮೀಸಲಾತಿಯಡಿ ಎಡಗೈ ಸಂಬಂಧಿತ ಜಾತಿಗಳಿರುವ ‘ಎ’ ಪ್ರವರ್ಗಕ್ಕೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ ‘ಬಿ’ ಪ್ರವರ್ಗಕ್ಕೆ ಶೇ 6 ಹಾಗೂ ಸೃಶ್ಯ ಮತ್ತು ಅಲೆಮಾರಿ ಜಾತಿಗಳಿರುವ ‘ಸಿ’ ಪ್ರವರ್ಗಕ್ಕೆ ಶೇ 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಿ ರಾಜ್ಯ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಕಾನೂನಿನ ಅಡಚಣೆಗಳು ಎದುರಾಗುವ ಸನ್ನಿವೇಶ ಸೃಷ್ಟಿಯಾಗಿರುವ ಬೆನ್ನಲ್ಲೇ, ಆದೇಶಕ್ಕೆ ಹೆಚ್ಚಿನ ಕಾನೂನು ಬಲ ನೀಡಲು ತರಲಾದ ಮಸೂದೆಯನ್ನು ಗುರುವಾರ ನಡೆದ ಸಚಿವ ಸಂಪುಟಯಲ್ಲಿ ಮಂಡಿಸಲಾಗಿತ್ತು.
ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಸಚಿವ ಸಂಪುಟ ಸಭೆಯು ಮಸೂದೆಗೆ ಒಪ್ಪಿಗೆ ನೀಡಿತು. ನಿಯಮಗಳನ್ನು ರೂಪಿಸುವ ಮುನ್ನ ಬೇರೆ ಬೇರೆ ರಾಜ್ಯಗಳು ಒಳ ಮೀಸಲು ವಿಷಯದಲ್ಲಿ ಯಾವ ರೀತಿಯಲ್ಲಿ ಕಾನೂನಿನ ರಕ್ಷಣಾತ್ಮಕ ಕ್ರಮ ಕೈಗೊಂಡಿವೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು. ಬಳಿಕ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂಬ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿತು ಎಂದು ಗೊತ್ತಾಗಿದೆ.
ಈ ತಿದ್ದುಪಡಿ ಮಸೂದೆ ಇದೇ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಮಸೂದೆಯ ಲಾಭವೇನು?
101 ಜಾತಿಗಳನ್ನು ‘ಎ’, ‘ಬಿ’, ‘ಸಿ’ ಎಂದು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಸರ್ಕಾರಿ ಹುದ್ದೆಗಳಿಗೆ ಒಳ ಮೀಸಲಾತಿ ಕಾರಣಕ್ಕೆ ತಡೆ ಹಿಡಿಯಲಾಗಿದ್ದ ನೇರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಇದರಿಂದ ನೆರವಾಗಲಿದೆ. ಅಲ್ಲದೇ ಎಲ್ಲ ಇಲಾಖೆಗಳು ಮತ್ತು ಅವುಗಳ ಅಧೀನದ ಎಲ್ಲ ನಿಗಮ, ಮಂಡಳಿ, ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಗೆ ಹಸಿರು ನಿಶಾನೆ ಸಿಗಲಿದೆ.
ಒಳ ಮೀಸಲಾತಿ ಕಲ್ಪಿಸಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳನ್ನು ‘ಎ’, ‘ಬಿ’, ‘ಸಿ’, ‘ಡಿ’, ‘ಇ’ ಎಂದು ಐದು ಪ್ರವರ್ಗಗಳಾಗಿ ವಿಂಗಡಿಸಿ, ಮೀಸಲಾತಿ ಹಂಚಿಕೆ ಮಾಡಿ ಶಿಫಾರಸು ಮಾಡಿತ್ತು. ಆ ವರದಿಯಲ್ಲಿ ಪ್ರವರ್ಗ ‘ಇ’ಯಲ್ಲಿರುವ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಈ ಮೂರು ಸಮುದಾಯಗಳು ಮೂಲ ಜಾತಿಯನ್ನು ತಿಳಿಸದೇ ಇರುವುದರಿಂದ ಪ್ರವರ್ಗ ‘ಎ’ ಅಥವಾ ಪ್ರವರ್ಗ ‘ಬಿ’ ಅಡಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು.
ವಯೋಮಿತಿ ಸಡಿಲಿಕೆಗೂ ಅವಕಾಶ:
ಉದ್ಯೋಗಗಳ ನೇಮಕಾತಿಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲು ಕೂಡಾ ಡಿಪಿಎಆರ್ ಅಗತ್ಯ ಕ್ರಮ ವಹಿಸಲು ನೆರವಾಗಲಿದೆ.
ಹೊಸ ದತ್ತಾಂಶ ಅಥವಾ ಮಾಹಿತಿ ಬಂದಾಗ ಅಗತ್ಯ ಮಾರ್ಪಾಡುಗಳನ್ನು ಮಾಡಲು ಕರ್ನಾಟಕ ರಾಜ್ಯ ಎಸ್‌ಸಿ ಮತ್ತು ಎಸ್‌ಟಿ ಆಯೋಗಕ್ಕೆ ಅಧಿಕಾರ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಕಾಯ್ದೆ 2002ಕ್ಕೆ ತಿದ್ದುಪಡಿ ಮಾಡಲಾಗುವುದು.
‘ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆ ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿ, ಕಾಲ ಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸುವುದಕ್ಕೂ ಅವಕಾಶವಾಗಲಿದೆ ಎಂದು ಮೂಲಗಳು ಹೇಳಿವೆ.
ಶೇ 56ಕ್ಕೆ ಹೆಚ್ಚಿಸಲು ನಿರ್ಣಯ
ಈಗಿರುವ ಮೀಸಲಾತಿ ಪ್ರಮಾಣ ವನ್ನು ಹೆಚ್ಚಿಸಲು ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಇದೇ ಅಧಿವೇಶನದಲ್ಲಿ ಕೈಗೊಳ್ಳಲು ಸಂಪುಟ ಸಭೆ ತೀರ್ಮಾನಿಸಿದೆ.
ಪರಿಶಿಷ್ಟ ಜಾತಿಯವರಿಗೆ ನ್ಯಾಯ ಒದಗಿಸಬೇಕಾದರೆ ಈ ಅನಿವಾರ್ಯ ಕ್ರಮ ಕೈಗೊಳ್ಳಲೇಬೇಕಿದೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟು, ಸದನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಕರ್ನಾಟಕದಲ್ಲಿ ಈಗ ಇರುವ ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದು ಹೇಳಿದೆ. ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಜನ ಸಂಖ್ಯೆಯ ಪ್ರಮಾಣಕ್ಕೆ ಅನುಗುಣ ವಾಗಿ, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿತ್ತು. ಇದರಿಂದಾಗಿ ಮೀಸಲಾತಿ ಪ್ರಮಾಣ ಶೇ 50ರ ಗಡುವನ್ನು ಮೀರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.