ಪ್ಲಾಸ್ಟಿಕ್
-ಸಾಂದರ್ಭಿಕ ಚಿತ್ರ
ಬೆಂಗಳೂರು: ಇನ್ನು ಮುಂದೆ ಪ್ಲಾಸ್ಟಿಕ್ ಕೈಚೀಲಗಳ (ಕ್ಯಾರಿ ಬ್ಯಾಗ್) ಬದಲಿಗೆ ಜೈವಿಕವಾಗಿ ವಿಘಟನೆಯಾಗುವ ಕೈಚೀಲಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡುವುದಕ್ಕೆ ಅವಕಾಶ ನೀಡುವ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ‘2016ರ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವ್ಯಾಖ್ಯಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಆ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳ ತಯಾರಿಕೆ, ಮಾರಾಟ, ದಾಸ್ತಾನು ನಿಷೇಧಿಸಲಾಗಿತ್ತು’ ಎಂದು ತಿಳಿಸಿದರು.
‘ಇತ್ತೀಚೆಗೆ ಸಸ್ಯಜನ್ಯ ಕೈಚೀಲಗಳ ಆವಿಷ್ಕಾರವಾಗಿದ್ದು, ಇವು 180 ದಿನಗಳಲ್ಲಿ ಜೈವಿಕವಾಗಿ ವಿಘಟನೆಯಾಗುತ್ತವೆ. ಹೀಗಾಗಿ ಇದರ ಮಾರಾಟಕ್ಕೆ ಅನುಕೂಲವಾಗುವಂತೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ’ ಎಂದರು.
‘ಈ ಹಿಂದೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದ ಸಭೆಯಲ್ಲಿ 2016ರ ಅಧಿಸೂಚನೆಗೆ ತಿದ್ದುಪಡಿ ತಂದು, ಕೇಂದ್ರ ಪರಿಸರ ಇಲಾಖೆಯ 2021 ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಸಂಪುಟದ ತೀರ್ಮಾನ ಕೇಂದ್ರ ಸರ್ಕಾರದ 21ರ ಆದೇಶಕ್ಕೆ ಅನುಗುಣವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.