ADVERTISEMENT

ಬಸವ ಜಯಂತಿ ಲಿಂಗಾಯತರಿಗೆ, ಈದ್ ದೇಶದ ಹಬ್ಬ: ಕಿರಣ್ ಮಜುಂದಾರ್ ಶಾ ಟ್ವೀಟ್ ವಿವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2022, 9:52 IST
Last Updated 4 ಮೇ 2022, 9:52 IST
ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ
ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ   

ಬೆಂಗಳೂರು: ನಿನ್ನೆಯಷ್ಟೇ ಕರ್ನಾಟಕ ಸೇರಿದಂತೆ ದೇಶ ವಿದೇಶಗಳಲ್ಲಿ ಮಹಾನ್ ಮಾನವತಾವಾದಿ ಹಾಗೂ ಸಮಾಜ ಸುಧಾರಕ ಬಸವೇಶ್ವರರ ಜಯಂತಿಯನ್ನು ಆಚರಿಸಲಾಗಿದೆ. ಜಾತಿ ಮತ ಪಂಥಗಳ ಬೇಧ ಮರೆತು ಅನೇಕರು ಬಸವಣ್ಣನ ಜಯಂತಿ ಆಚರಿಸಿದ್ದಾರೆ. ಅಲ್ಲದೇ ಇದೇ ದಿನ ಮುಸ್ಲಿಂ ಸಮುದಾಯದ ಈದ್ ಉಲ್ ಫಿತ್ರ್‌ ಹಬ್ಬವನ್ನೂ ಆಚರಿಸಲಾಗಿದೆ.

ಆದರೆ, ಇದೇ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ನಿನ್ನೆ ಮಾಡಿರುವ ಎರಡು ಟ್ವೀಟ್‌ಗಳು ಗಮನ ಸೆಳೆದಿರುವುದಲ್ಲದೇ ಚರ್ಚೆಗೆ ಗ್ರಾಸವಾಗಿವೆ.

ಬಸವ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ಕಿರಣ್ ಅವರು, ‘ಇವತ್ತು ಬಸವ ಜಯಂತಿ ಆಚರಿಸುತ್ತಿರುವ ಲಿಂಗಾಯತ ಸಮುದಾಯದವರಿಗೆ ನನ್ನ ಹಾರ್ದಿಕ ಶುಭಾಶಯಗಳು’ ಎಂದು ಹೇಳಿದ್ದಾರೆ.

ADVERTISEMENT

ಇನ್ನೊಂದು ಟ್ವೀಟ್ ಮಾಡಿ ‘ಇವತ್ತು ಭಾರತ ದೇಶ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿದೆ. ಈ ಪವಿತ್ರ ದಿನಕ್ಕೆ ನನ್ನ ಶುಭಾಶಯಗಳು’ ಎಂದು ತಿಳಿಸಿದ್ದಾರೆ.

ಆದರೆ, ಇವೆರಡೂ ಟ್ವೀಟ್‌ಗಳನ್ನು ಹೋಲಿಸಿ ಅನೇಕರು ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾನ್ ಸಮಾಜ ಸುಧಾರಕ ಬಸವಣ್ಣನನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಅವರ ಟ್ವೀಟ್‌ಗೆ 55 ಜನ ಕಮೆಂಟ್‌ಗಳನ್ನು ಮಾಡಿದ್ದು ಬಹುತೇಕರು ಶಾ ಅವರ ನಡೆಯನ್ನು ಖಂಡಿಸಿದ್ದಾರೆ. ಬಸವ ಜಯಂತಿ ಲಿಂಗಾಯತರಿಗೆ ಸಿಮೀತ? ಆದರೆ, ಈದ್ ಮಾತ್ರ ಇಡೀ ದೇಶದ ಹಬ್ಬವಾ ಎಂದು ಅನೇಕರು ಪ್ರಶ್ನಿಸಿದ್ದಾರೆ.

ತಮ್ಮ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ಮತ್ತೊಂದು ಟ್ವೀಟ್ ಮಾಡಿರುವ ಕಿರಣ್, ಬಸವಣ್ಣ ಅವರು ಲಿಂಗಾಯತ ಸಮುದಾಯದ ಮೂಲ ಸ್ಥಾಪಕರು. ಎಲ್ಲ ಆಧ್ಯಾತ್ಮಿಕ ನಾಯಕರನ್ನು ಎಲ್ಲರೂ ಗೌರವಿಸಬೇಕು. ಆದರೆ, ನಾವು ಆ ನಾಯಕರ ಮೂಲವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

ಮಾಳೇನಹಳ್ಳಿ ದಿನೇಶ್ ಎನ್ನುವರು ಟ್ವೀಟ್ ಮಾಡಿ,ಯಾಕೋ ಇತ್ತೀಚೆಗೆ ನಿಮ್ಮ ಟ್ವಿಟಗಳು ವಿವಾದಕ್ಕೆ ಕಾರಣವವಾಗಿರುತ್ತಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಅದಕ್ಕೆ ತಕ್ಕ ಹಾಗೆ ಮಾತನಾಡಿದರೆ ಅದಕ್ಕೊಂದು ಬೆಲೆ ಎಂದಿದ್ದಾರೆ.

2019 ರಲ್ಲಿ ಫೋರ್ಬ್ಸ್‌ ನಿಯತಕಾಲಿಕೆ ಪ್ರಕಾರ ಬೆಂಗಳೂರು ಮೂಲದ ಕಿರಣ್ ಮಜುಂದಾರ್ ಶಾ ಅವರು ವಿಶ್ವದ ಶಕ್ತಿಶಾಲಿ ಮಹಿಳೆಯರಲ್ಲಿ 68 ನೇ ಸ್ಥಾನ ಪಡೆದಿದ್ದರು. ಪದ್ಮಶ್ರೀ ಪ್ರಶಸ್ತಿಯೂ ಅವರಿಗೆ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.