ಬೆಂಗಳೂರು: ‘ಜೈವಿಕ ಇಂಧನ ಉತ್ಪಾದನಾ ಘಟಕಗಳಿಗೆ ತೆರಿಗೆ ರಿಯಾಯಿತಿ, ಪ್ರೋತ್ಸಾಹ ಮತ್ತು ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟರೆ, ಐದು ವರ್ಷಗಳಲ್ಲಿ ₹1 ಲಕ್ಷ ಕೋಟಿ ಬಂಡವಾಳ ಆಕರ್ಷಿಸಬಹುದು. ಇದಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಜೈವಿಕ ಇಂಧನ ಕಾರ್ಯಯೋಜನೆಗಳು ಮತ್ತು ನೂತನ ಜೈವಿಕ ಇಂಧನ ನೀತಿ ಕುರಿತು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಳಿಯ ಅಧ್ಯಕ್ಷ ಎಸ್.ಇ.ಸುಧೀಂದ್ರ ಅವರು ಈ ವಿಷಯ ಪ್ರಸ್ತಾಪಿಸಿದರು.
‘ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಉತ್ತೇಜಿಸಲು ಬಿಬಿಎಂಪಿ, ನಗಾರಾಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಜಲಮಂಡಳಿ, ಅರಣ್ಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಹಕಾರ ಅತ್ಯಗತ್ಯ. ಆದರೆ ಯಾವ ಇಲಾಖೆ ಮತ್ತು ಸಂಸ್ಥೆಗಳೂ ಸಹಕಾರ ನೀಡುತ್ತಿಲ್ಲ’ ಎಂದು ಸುಧೀಂದ್ರ ಅವರು ಸಭೆಗೆ ತಿಳಿಸಿದರು.
‘ಜೈವಿಕ ಡೀಸೆಲ್ ಮಾರಾಟ ಮಳಿಗೆಗಳ ಪ್ರಾರಂಭಕ್ಕೆ ನಿರಾಕ್ಷೇಪಣ ಪತ್ರ ಮತ್ತು ಪರವಾನಗಿ ನೀಡುವಲ್ಲಿ ಈ ಇಲಾಖೆಗಳು ವಿಳಂಬ ಮಾಡುತ್ತಿವೆ. ಈ ಕಾರ್ಯಗಳನ್ನು ಮಾಡಲು ಮಂಡಳಿಯನ್ನೇ ನೋಡಲ್ ಏಜೆನ್ಸಿಯಾಗಿ ನೇಮಿಸಬೇಕು’ ಎಂದು ಕೋರಿದರು. ಮುಖ್ಯ ಕಾರ್ಯದರ್ಶಿಯು, ‘ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.