ADVERTISEMENT

ಸುಪ್ರೀಂ ಕೋರ್ಟ್‌ಗೆ ಬಿಷಪ್‌ ಸ್ಯಾಮ್ಯುಯೆಲ್‌ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 6 ಮೇ 2023, 17:53 IST
Last Updated 6 ಮೇ 2023, 17:53 IST
ಬಿಷಪ್‌ ಪ್ರಸನ್ನ ಕುಮಾರ್‌ ಸ್ಯಾಮ್ಯುಯೆಲ್‌
ಬಿಷಪ್‌ ಪ್ರಸನ್ನ ಕುಮಾರ್‌ ಸ್ಯಾಮ್ಯುಯೆಲ್‌   

ಬೆಂಗಳೂರು: ಯಾವುದೇ ಆಡಳಿತಾತ್ಮಕ ನಿರ್ಧಾರ ಅಥವಾ ಚಟುವಟಿಕೆ ಕೈಗೊಳ್ಳದಂತೆ ನಿರ್ಬಂಧ ವಿಧಿಸಿರುವ ತಮ್ಮ ವಿರುದ್ಧದ ಹೈಕೋರ್ಟ್‌ ಆದೇಶ ಪ್ರಶ್ನಿಸಿ, ಕರ್ನಾಟಕ ಸೆಂಟ್ರಲ್ ಡಯಾಸೆಸ್‌ನ (ಬಿಷಪ್‌ ಆಡಳಿತ ನಿರ್ವಹಿಸುವ ಪ್ರಾಂತ್ಯ ವ್ಯಾಪ್ತಿ) ಬಿಷಪ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರರಾದ ಬೆಂಗಳೂರಿನ  ಮನೋರಾಯನಪಾಳ್ಯದ ಹಿರಿಯ ನಾಗರಿಕ ಜೆ.ಸಿ.ಸಂಪತ್‌ ಕುಮಾರ್ ತಮ್ಮ ವಕೀಲ ಕೆ.ಬಿ.ಎಸ್‌.ಮಣಿಯನ್‌ ಮುಖಾಂತರ 2023ರ ಏಪ್ರಿಲ್‌ 27ರಂದು ನೀಡಿದ್ದ ಲಾಯರ್‌ ನೋಟಿಸ್‌ಗೆ, ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ ತಮ್ಮ ವಕೀಲರಾದ ಬಿ.ಎಂ.ಅರುಣ್‌ ಮುಖಾಂತರ 2023ರ ಮೇ 4ರಂದು ಲಿಖಿತ ಪ್ರತ್ಯುತ್ತರ ವಾನಿಸಿದ್ದಾರೆ.

‘ನನ್ನ ಕಕ್ಷಿದಾರ ಬಿಷಪ್‌ ಪಿ.ಕೆ.ಸ್ಯಾಮ್ಯುಯೆಲ್‌ ಉನ್ನತ ಧರ್ಮಾಧಿಕಾರಿ ಸ್ಥಾನದಲ್ಲಿದ್ದು ಈಗಲೂ ಆ ಸ್ಥಾನದಲ್ಲಿಯೇ ಮುಂದುವರೆದಿರುತ್ತಾರೆ. ಆದಾಗ್ಯೂ, ಮೇಲ್ಮನವಿಗೆ ಸಂಬಂಧಿಸಿದಂತೆ 2023ರ ಏಪ್ರಿಲ್‌ 21ರಂದು ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಮುಖೇನ ಮೇಲ್ಮನವಿ ಸಲ್ಲಿಸಿರುತ್ತಾರೆ. ಈ ಕುರಿತ ನಿವೇದನಾ ಅರ್ಜಿಯು (11598/2023) ಶೀಘ್ರವೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲಿದೆ’ ಎಂದು ಪ್ರತ್ಯುತ್ತರದಲ್ಲಿ ವಿವರಿಸಲಾಗಿದೆ.

ADVERTISEMENT

‘ಸ್ಯಾಮ್ಯುಯೆಲ್‌ ಅವರು ದಕ್ಷಿಣ ಭಾರತದ ಚರ್ಚ್‌ಗಳ ಸಂವಿಧಾನ ಮತ್ತು ಕರ್ನಾಟಕ ಸೆಂಟ್ರಲ್‌ ಡಯಾಸೆಸ್‌ನ ನಿಯಮಗಳಿಗೆ ಅನುಗುಣವಾಗಿಯೇ ನಡೆದುಕೊಂಡು ಬರುತ್ತಿದ್ದಾರೆ. ಅಂತೆಯೇ, ಮದ್ರಾಸ್‌ ಹೈಕೋರ್ಟ್‌ನಲ್ಲಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು 2023ರ ಜೂನ್‌ 6ಕ್ಕೆ ನಿಗದಿಪಡಿಸಲಾಗಿದೆ. ಹೀಗಾಗಿ, ತಾವುಗಳು ಕೋರ್ಟ್‌ನ ಮುಂದಿನ ಆದೇಶ ಬರುವತನಕ ನಿರೀಕ್ಷಿಸಬೇಕು‘ ಎಂದು ದಾವೆದಾರ ಜೆ.ಸಿ.ಸಂಪತ್‌ ಕುಮಾರ್ ಅವರಿಗೆ ಸೂಚಿಸಲಾಗಿದೆ.

ಏನಿದು ಪ್ರಕರಣ?

ದಕ್ಷಿಣ ಭಾರತದ ಪ್ರಾಟೆಸ್ಟೆಂಟ್‌ ಚರ್ಚ್‌ಗಳ ಸಂವಿಧಾನದ ಪ್ರಕಾರ ಬಿಷಪ್‌ಗಳ ನಿವೃತ್ತಿ ವಯೋಮಿತಿ 67 ವರ್ಷ. ಆದರೆ, 2022ರ ಡಿಸೆಂಬರ್‌ 21ರಂದು ಸಿನಾಡ್‌ನಲ್ಲಿ (ಪಾದ್ರಿಗಳ ಪರಿಷತ್‌) ಮಂಡಿಸಲಾಗಿರುವ ತಿದ್ದುಪಡಿ ಅನುಸಾರ ಈ ವಯೋಮಿತಿಯನ್ನು 67 ರಿಂದ 70 ವರ್ಷಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ. ‘ಇದು ದುರುದ್ದೇಶಪೂರ್ವ’ ಎಂದು ಆಕ್ಷೇಪಿಸಿ ಜೆ.ಸಿ.ಸಂಪತ್‌ಕುಮಾರ್ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ 2023ರ ಫೆ. 10ರಂದು ನಿವೃತ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.