ADVERTISEMENT

ಬಿಟ್‌ಕಾಯಿನ್‌ ಪ್ರಕರಣ: ಠಾಣೆಗೆ ಹಾಜರಾಗದ ಆರೋಪಿ ಶ್ರೀಕಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 20:24 IST
Last Updated 27 ನವೆಂಬರ್ 2021, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ಸಹಿ ಮಾಡಲು ಜೀವನ್‌ಭಿಮಾನಗರ ಠಾಣೆಗೆ ಶನಿವಾರ ಗೈರಾದ.

ಡ್ರಗ್ಸ್ ಸೇವಿಸಿ ಹೋಟೆಲೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಶ್ರೀಕೃಷ್ಣ ಹಾಗೂ ವಿಷ್ಣು ಭಟ್‌ನನ್ನು ಪೊಲೀಸರು ಬಂಧಿ ಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶ್ರೀಕೃಷ್ಣ, ಜಾಮೀನು ಪಡೆದುಕೊಂಡು ಜೈಲಿನಿಂದ ಹೊರ ಬಂದಿದ್ದ. ‘ಪ್ರತಿ ಶನಿವಾರ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು’ ಎಂಬುದಾಗಿ ನ್ಯಾಯಾಲಯ ಷರತ್ತು ವಿಧಿಸಿತ್ತು. ಆದರೆ, ಶನಿವಾರ ರಾತ್ರಿಯಾದರೂ ಶ್ರೀಕೃಷ್ಣ ಠಾಣೆಗೆ ಬರಲಿಲ್ಲ. ಆತ ಎಲ್ಲಿದ್ದಾನೆ ಎಂಬ ಮಾಹಿತಿಯೂ ಪೊಲೀಸರಿಗೆ ಗೊತ್ತಿಲ್ಲ.

‘ಶ್ರೀಕೃಷ್ಣ ಠಾಣೆಗೆ ಬಾರದಿರುವುದು ನ್ಯಾಯಾಲಯದ ಷರತ್ತು ಉಲ್ಲಂಘನೆ ಆಗುತ್ತದೆ. ಯಾವ ಕಾರಣಕ್ಕೆ ಆತ ಠಾಣೆಗೆ ಬಂದಿಲ್ಲವೆಂಬ ಬಗ್ಗೆ ಆತನೇ ತಿಳಿಸಬೇಕು. ಆದರೆ, ಇದುವರೆಗೂ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಆರೋಪಿ ಗೈರಾದದ್ದನ್ನು ದಾಖಲಿಸಿಕೊಳ್ಳಲಾಗಿದೆ. ಕೆಲ ದಿನ ಕಾದು ನೋಡಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಜಾಮೀನು ರದ್ದು ಮಾಡುವಂತೆ ಕೋರಲಾಗುವುದು’ ಎಂದೂ ತಿಳಿಸಿದರು.

ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕೃಷ್ಣ ತಲೆಮರೆಸಿಕೊಂಡು ಓಡಾಡುತ್ತಾನೆ. ಆತನ ಜೀವಕ್ಕೆ ಅಪಾಯವಿರುವುದಾಗಿ ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಹ ಇತ್ತೀಚೆಗೆ ಹೇಳಿದ್ದರು. ಭದ್ರತೆಗೆ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವನ್ನು ರಚಿಸಿದರೂ ಶ್ರೀಕಿ ಸುಳಿವು ಮಾತ್ರ ಸಿಕ್ಕಿಲ್ಲ.

ಬಿಟ್‌ಕಾಯಿನ್‌ ಪ್ರಕರಣ: ಸ್ಪಷ್ಟ ಮಾಹಿತಿಗೆ ಆಗ್ರಹ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಭಾಗಿಯಾಗಿರುವ ಬಿಟ್‌ಕಾಯಿನ್‌ ಹ್ಯಾಕಿಂಗ್‌ ಪ್ರಕರಣಕ್ಕೆ ಸಂಬಂಧಿಸಿದ ಸ್ಪಷ್ಟ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರನ್ನು
ಆಗ್ರಹಿಸಿದೆ.

ಮುಖ್ಯ ಕಾರ್ಯದರ್ಶಿಯವರಿಗೆ ಶುಕ್ರವಾರ ಪತ್ರ ಸಲ್ಲಿಸಿರುವ ಕೆಆರ್‌ಎಸ್‌ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ‘ಬಿಟ್‌ಕಾಯಿನ್‌ ಹ್ಯಾಕಿಂಗ್‌ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವೇ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿತ್ತು ಎಂದು ಮುಖ್ಯಮಂತ್ರಿಯವರು ಹೇಳಿಕೆ ನೀಡಿದ್ದರು. ಇಂಟರ್‌ಪೋಲ್‌ಗೂ ಮಾಹಿತಿ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ದಾಖಲೆಗಳು ಮತ್ತು ಮುಖ್ಯಮಂತ್ರಿಯವರ ಹೇಳಿಕೆ ನಡುವೆ ವ್ಯತ್ಯಾಸ ಕಂಡುಬರುತ್ತಿದೆ’ ಎಂದು ಹೇಳಿದ್ದಾರೆ.

‘ಪ್ರಭಾವಿ ವ್ಯಕ್ತಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಚಿನ್‌ ಮಾಮನಿ ಎಂಬುವವರು ಪ್ರಧಾನಿಯವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿದೆ. ಈ ಪತ್ರದ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಚಿನ್‌ ಮಾಮನಿ ಪತ್ರ ರಾಜ್ಯ ಸರ್ಕಾರದ ಬಳಿ ಇದೆಯೆ? ಈ ಬಗ್ಗೆ ಕ್ರಮಕ್ಕೆ ಪ್ರಧಾನಿ ಕಚೇರಿಯಿಂದ ನಿರ್ದೇಶನ ನೀಡಲಾಗಿದೆಯೆ? ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕರಣ ವರ್ಗಾಯಿಸಿತ್ತೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಸರ್ಕಾರ ಬರೆದಿರುವ ಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.